

ಬೇಲೂರು: ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆ ವ್ಯವಹಾರಿಕ ಜ್ಞಾನವು ಮುಖ್ಯವಾಗಿದ್ದು, ಮಕ್ಕಳು ವಿದ್ಯೆಯೊಂದಿಗೆ ಈ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ತಹಸೀಲ್ದಾರ್ ರಮೇಶ್ ಹೇಳಿದರು.
ಪಟ್ಟಣದ ನೆಹರು ನಗರದ ದಿವ್ಯ ಆಂಗ್ಲ ಮಾಧ್ಯಮ ಶಾಲೆ ಆವರಣ ಸೋಮವಾರ ದಿವ್ಯ ಸಾಂಪ್ರದಾಯಿಕ ಜಾತ್ರೆ ಹಾಗೂ ಮಕ್ಕಳ ಆಹಾರ ಮೇಳ ಮತ್ತು ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಬೇಕು. ಇದರೊಂದಿಗೆ ತಿನ್ನುವ ಆಹಾರ ಪದ್ದತಿಯನ್ನು ಆಯ್ಕೆ ಮಾಡಿ, ನಮ್ಮ ಆರೋಗ್ಯ ಕಾಪಡಿಕೊಳ್ಳುವುದು ಮುಖ್ಯವಾಗಿದೆ. ಇದರೊಂದಿಗೆ ಮಕ್ಕಳು ವಿದ್ಯಾಭ್ಯಾಸದೊಂದಿಗೆ ಏನನ್ನಾದರೂ ಸಾಧಿಸಲು ಅವಕಾಶಗಳು ಅಗತ್ಯ. ಆದರೆ ಸಿಕ್ಕ ಅವಕಾಶಗಳನ್ನೆ ಬಳಸಿಕೊಂಡು ತಮ್ಮ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು. ಹಾಗಾದಾಗ ಮಾತ್ರ ಪೋಷಕರ ಮತ್ತು ಶಿಕ್ಷಕರ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಶಿಕ್ಷಣ ಕೇವಲ ತರಗತಿಯಲ್ಲಿ ಮಾತ್ರ ಬಳಕೆಗೆ ಸೀಮಿತವಾಗಿರದೆ ಎಲ್ಲ ಕ್ಷೇತ್ರದಲ್ಲೂ ಪಡೆಯುವಂತ್ತಾಗಿರುತ್ತದೆ. ಅಲ್ಲದೆ ಇಂತಹ ಆಹಾರ ಮೇಳ ಮತ್ತು ಸಂತೆಯಲ್ಲಿ ಮಕ್ಕಳು ಭಾಗವಹಿಸಿದ ಸಂದರ್ಭ ಅವರನ್ನು ಗಮನಿಸಿದರೆ ಅವರ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಆಶಾಭಾವನೆ ಕಾಣುತಿದ್ದೇವೆ. ಇಲ್ಲಿ ಮಕ್ಕಳು ತಮಗೆ ಬೇಕಾದ ಇಷ್ಟವಾದ ಆಹಾರ ಪದಾರ್ಥಗಳನ್ನು ಇಟ್ಟು ಧರ ನಿಗದಿ ಪಡಿಸಿ ವ್ಯಾಪಾರಕ್ಕೆ ಇಳಿದಿದ್ದಾರೆ. ಇದು ಮಕ್ಕಳಲ್ಲಿ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನ ಹೆಚ್ಚಿಸಲು ಸಹಕಾರಿಯಾಗಿದೆ. ಇವರಿಗೆ ಪೋಷಕರು ಹಾಗೂ ಶಿಕ್ಷಕ ವೃಂದ ಹೆಚ್ಚಿನದಾಗಿ ಪ್ರೋತ್ಸಾಹಿಸಬೇಕಿದೆ. ಅಲ್ಲದೆ ಇಲಾಖೆಯಿಂದ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದಕ್ಕಾಗಿ ಪ್ರತಿಭಾ ಕಾರಂಜಿ, ಕಲೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವ್ಯಕ್ತಿತ್ವವನ್ನು ರೂಪಿಸಲಾಗುತ್ತಿದೆ ಎಂದರು.
ದಿವ್ಯ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಮಾತನಾಡಿ, ನಮ್ಮ ಶಾಲಾ ಮಕ್ಕಳಲ್ಲಿ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಕಳೆದ ಐದಾರು ವರ್ಷಗಳಿಂದ ಇಂತಹ ಕಾರ್ಯಕ್ರಮ ಆಯೋಜಿಸುತಿದ್ದೇವೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಉತ್ತಮ ಸಹಕಾರ ನಿಡುತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿ ಜ್ಷಾನ ಸಂಪಾದನೆಯೊಂದಿಗೆ ದೇಶಕ್ಕೆ ಕೊಡುಗೆ ನೀಡುವಂತ್ತಾಗಬೇಕು ಎಂದರು.
ದಿವ್ಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವನಜಾಕ್ಷಿ, ಬಿಆರ್‌ಸಿ ಶಿವಮರಿಯಪ್ಪ, ಇಸಿಒಗಳಾದ ರವಿಕುಮಾರ್, ಉಮೇಶ್, ಶಿವಪ್ಪ, ಮಂಜುನಾಥ್, ಗೋಪಾಲ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಪಿಎಸ್‌ಐ ರಮೇಶ್, ಎಎಸ್‌ಐ ನಾಗರಾಜ್, ಡಾ.ರಾಜ್ ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್, ಮುಖ್ಯ ಶಿಕ್ಷಕರಾದ ಚೇತನ್, ಉಮೇಶ್ ಸೇರಿದಂತೆ ಇತರರಿದ್ದರು.