

ಭಾಲ್ಕಿ: ನಕಾರಾತ್ಮಕ ಯೋಚನೆಗಳೇ ಜೀವನದ ಬಹುದೊಡ್ಡ ಶತ್ರುಗಳಾಗಿದ್ದು, ವಿದ್ಯಾರ್ಥಿಗಳು ಇವುಗಳ ಮೇಲೆ ಜಯಗಳಿಸಬೇಕು. ದುರಾಲೋಚನೆಯ ವಿರುದ್ಧ ಸದಾ ಹೋರಾಡಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಪಟ್ಟಣದ ಲೆಕ್ಚರ್ ಕಾಲನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದದ್ದ ಅಂತರ ಶಾಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಒಂದು ರಾಜ್ಯದಲ್ಲಿ ರಾಜನಿಗೆ ಮಾತ್ರ ಗೌರವ ಇರುತ್ತದೆ. ಆದರೆ ಜ್ಞಾನಿಗೆ ಇಡೀ ಜಗತ್ತು ತಲೆಬಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸದಾ ಒಳಿತನ್ನು ಯೋಚಿಸಬೇಕು. ಯಶಸ್ವಿ ಜೀವನಕ್ಕೆ ಯಾವುದೇ ಅಡ್ಡ ಮಾರ್ಗವಿಲ್ಲ ಎನ್ನುವುದನ್ನು ತಿಳಿದುಕೊಂಡು ಉತ್ತಮ ಶಿಕ್ಷಣ, ಸಂಸ್ಕಾರ ಪಡೆದು ಜ್ಞಾನವಂತರಾಗಿ ರಾಜ್ಯ, ರಾಷ್ಟ್ರವನ್ನು ಬೆಳಗಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಖಡಕೇಶ್ವರ ವಿದ್ಯಾ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾವ ಧೂಪೆ ಮಾತನಾಡಿ, ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜವನ್ನು ಬೆಳಗಿಸಲು ಉಪಯೋಗಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಅಶೋಕ ಲೋಖಂಡೆ, ಖಡಕೇಶ್ವರ ಶಾಲೆಯ ಮುಖ್ಯಗುರು ಶಿವಲಿಂಗ ಕುಂಬಾರ ಮಾತನಾಡಿದರು. ಮುಖ್ಯಗುರು ಆನಂದ ಕಲ್ಯಾಣೆ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಸುಧೀರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಈ ಉದ್ಯಮಿ ಗಿರೀಶ ಕುಡತೆ, ಖಡಕೇಶ್ವರ ಪ್ರೌಢ ಶಾಲೆಯ ಪ್ರಾಥಮಿಕ ಶಾಲೆಯ ಮುಖ್ಯಗುರು ರೇಖುನಾಯಕ, ಉದಯ ಜೋಶಿ, ಶುಭಂ ರಾಯವಾಡೆ ಇದ್ದರು. ಅಂಜಲಿ ಜೋಶಿ ಸ್ವಾಗತ ಗೀತೆ ಹಾಡಿದರು. ಜಯಪ್ರಕಾಶ ಸಹಾನೆ ಸ್ವಾಗತಿಸಿದರು. ಪ್ರಕಾಶ ರುದನೂರೆ ನಿರೂಪಣೆ ಮಾಡಿದರು. ದಿಲೀಪಕುಮಾರ ಘಂಟೆ ವಂದಿಸಿದರು.
ಐದು ಶಾಲೆಗಳು ಭಾಗಿ: ಯುವ ಉದ್ಯಮಿ ಗಿರೀಶ ಕುಡತೆ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ, ಖಡಕೇಶ್ವರ ಪ್ರೌಢ ಶಾಲೆ ಭಾಲ್ಕಿ, ನಿರ್ಮಲಾ ಹಲ್ಮಂಡಗೆ ಶಾಲೆ ಭಾಲ್ಕಿ, ಸದ್ಗುರು ವಿದ್ಯಾಲಯ ಭಾಲ್ಕಿ ಮತ್ತು ಶಿವಯೋಗಿಶ್ವರ ಪ್ರೌಢ ಶಾಲೆ ಭಾತಂಬ್ರಾ ಸೇರಿ ಐದು ಶಾಲೆಯ ತಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ರಸಪ್ರಶ್ನೆ ಸ್ಪರ್ಧೆ ಪೂರಕವಾಗಿವೆ. ಇಂತಹ ಸ್ಪರ್ಧೆಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದರ ಜತೆಗೆ ಸಾಮಾನ್ಯ ಹೆಚ್ಚಿಸಲು ಸಹಾಯಕವಾಗುತ್ತವೆ.
| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ