

ಮೈಸೂರು: ಸುಲಭದ ಹಾದಿಗೆ ಆಸೆ ಪಡದೆ, ನಿರಂತರ ಕಠಿಣ ಪರಿಶ್ರಮದಿಂದ ದುಡಿದರೆ ಜೀವನದಲ್ಲಿ ಸಾಧನೆ ಮಾಡಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ಪರೀಕ್ಷಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಜ್ಞಾನಬುತ್ತಿಯಲ್ಲಿ ಗುರುವಾರ ಆಯೋಜಿಸಿದ್ದ ಬ್ಯಾಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾರ್ಥಿಗಳು ತಮ್ಮ ಎಲ್ಲ ಇತಿಮಿತಿಗಳನ್ನು ಮೀರಿ ತಮ್ಮೊಳಗಿನ ಆತ್ಮ ಸ್ಥೈರ್ಯದಿಂದ ಸಾಮರ್ಥ್ಯ ವೃದ್ಧಿ ಮಾಡಿಕೊಂಡು ಸಾಧನೆ ಮಾಡಬೇಕು. ಪರಿಶ್ರಮದಿಂದ ಜೀವನದಲ್ಲಿ ಮುಂದುವರಿಯುವಂತೆ ಸಲಹೆ ನೀಡಿದರು.
ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ಮಾತನಾಡಿ, ಜೀವನದಲ್ಲಿ ಗುರಿಯಿಟ್ಟು ಕೊಂಡು ಸಾಧನೆಗೆ ಹೊರಡುವಾಗ ಮೊದಲು ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ನನ್ನಿಂದಾಗದು ಎಂಬ ಪದ ನಿಮ್ಮಲ್ಲಿ ಸುಳಿಯಲೇ ಬಾರದು. ಉನ್ನತ ಹುದ್ದೆಗಳನ್ನು ಅಲಂಕರಿಸಿದವರ ಪಟ್ಟಿಯನ್ನೊಮ್ಮೆ ಅವಲೋಕಿಸಿದರೆ ಅವರೆಲ್ಲಾ ಗ್ರಾಮೀಣ, ಬಡತನ, ಹಿಂದುಳಿದವರ್ಗದ ಹಿನ್ನೆಲೆಯಿಂದ ಬಂದವರೇ ಆಗಿರುತ್ತಾರೆ. ಹೀಗಾಗಿ ಕುಂಟುನೆಪ ಹೇಳದೆ ಬದ್ಧತೆಯಿಂದ ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ, ಜ್ಞಾನಬುತ್ತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲಕ ವ್ಯಕ್ತಿಗಳಾದ ಎಂ.ಮನೋಜ್ ಕುಮಾರ್, ರೋಹನ್, ರವಿಕುಮಾರ್ ಇದ್ದರು.