

ಚಿತ್ರದುರ್ಗ: ಮುರುಘಾಪರಂಪರೆಯಲ್ಲಿ ಶ್ರೀ ಸಣ್ಣಬರಹದ ರಾಚವಟ್ಟಿ ಸ್ವಾಮೀಜಿ ಅವರು ಜ್ಞಾನಬಲವನ್ನು ಸಿದ್ಧಿಸಿಕೊಂಡಿದ್ದ ವಿಶಿಷ್ಟ ವ್ಯಕ್ತಿತ್ವದ ಶ್ರೀಗಳಾಗಿದ್ದರು ಎಂದು ಶ್ರೀ ಮಠದ ಸಾಧಕ ಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಶ್ರಾವಣಮಾಸದ ಪ್ರಯುಕ್ತ ಶ್ರೀ ಮಠದಲ್ಲಿ ಏರ್ಪಡಿಸಿದ್ದ ವಚನಾಭಿಷೇಕ, ವಚನ ಪಠಣ ಹಾಗೂ ಮುರುಘಾ ಗುರುಪರಂಪರೆಯ ಸ್ವಾಮೀಜಿಗಳ ವ್ಯಕ್ತಿತ್ವ ದರ್ಶನದ ಕಾರ್ಯಕ್ರಮದಲ್ಲಿ ಪೀಠ ಪರಂಪರೆಯ 11ನೇ ಶ್ರೀಗಳಾದ ಶ್ರೀ ಸಣ್ಣ ಬರಹದ ರಾಚವಟ್ಟಿ ಸ್ವಾಮೀಜಿ ಅವರ ಕುರಿತು ಮಾತನಾಡಿದರು.
ಶ್ರೀಗಳು ಮುದ್ದಾದ ಸಣ್ಣಬರಹಕ್ಕೆ ಹೆಸರಾಗಿದ್ದವರು. ಒಂದು ರೀತಿಯಲ್ಲಿ ಅವರು ಸರ್ವಜ್ಞರಾಗಿದ್ದರು. ಸಕಲ ಜೀವ ರಾಶಿಗೆ ಲೇಸನ್ನೆ ಬಯಸುವ ಮಹಾಮೇರುಗುಣ ಹೊಂದಿದ್ದರು ಎಂದು ತಿಳಿಸಿದರು.
ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ‌್ಯೆ ಡಾ.ಮಮತಾ ತಿಪ್ಪಣ್ಣ ಅವರು ಶ್ರೀಗಳ ಕುರಿತು ವಿಷಯಾವಲೋಕನ ಮಾಡಿದರು. ಗೊಡಬನಹಾಳ್ ಮುರಿಗೆಮ್ಮ, ಬಸವರಾಜಕಟ್ಟಿ, ದಗ್ಗೆ ತಿಪ್ಪೇರುದ್ರಪ್ಪ ಇತರರು ಇದ್ದರು.
ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಶಿಕ್ಷಕಿಯರಾದ ಭಾರತಿ ಸ್ವಾಗತಿಸಿ, ನೇತ್ರಾವತಿ ನಿರೂಪಿಸಿದರು. ಆಶಾರಾಣಿ ವಂದಿಸಿದರು.