

ಬೆಂಗಳೂರು ಗ್ರಾಮಾಂತರ: ಕೋವಿಡ್ ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂಬ ಉದ್ದೇಶದಿಂದ ಮಾರ್ಚ್‌ನಲ್ಲೇ ಬಿಡುಗಡೆ ಮಾಡಿದ ಆ್ಯಪ್ ಅನ್ನು ಇದುವರೆಗೆ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಸುತ್ತಿದ್ದು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಗ್ರಾಮಾಂತರ ಜಿಲ್ಲೆ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಜ್ಞಾನದೀಪ ಆ್ಯಪ್ ಅನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ಬಿಡುಗಡೆ ಮಾಡಿದ್ದರು. ಕಳೆದ ಮೂರು ಸಾಲಿನಲ್ಲಿ ಉತ್ತಮ ಫಲಿತಾಂಶ ಕಾಯ್ದುಕೊಂಡಿದ್ದ ಜಿಲ್ಲೆ ಈ ಬಾರಿ ಇನ್ನೂ ಉತ್ತಮ ಫಲಿತಾಂಶ ದಕ್ಕಿಸಿಕೊಳ್ಳುವ ಪ್ರಯತ್ನವಾಗಿ ಈ ಆ್ಯಪ್ ರೂಪಿಸಲಾಗಿದೆ ಎಂದು ಡಿಡಿಪಿಐ ತಿಳಿದಿದ್ದಾರೆ.
ಕರೊನಾ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಾಲಾ-ಕಾಲೇಜು ಬಂದ್ ಮಾಡಲಾಯಿತು. ತರಗತಿಗಳು ನಡೆಯದಿದ್ದರೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ದೂರವಾಗುವ ಕಾರಣಕ್ಕೆ ಆನ್‌ಲೈನ್ ತರಗತಿ ನಡೆಸಿ ಆನ್‌ಲೈನ್‌ನಲ್ಲೇ ಪರೀಕ್ಷೆ ಮಾಡಲಾಯಿತು. ಇದನ್ನೇ ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಜ್ಞಾನದೀಪ ಆ್ಯಪ್ ಬಿಡುಗಡೆ ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡರ ಪ್ರಯತ್ನ, ಸಹ ಶಿಕ್ಷಕರು ಹಾಗೂ ಅಧಿಕಾರಿಗಳ ಶ್ರಮದಿಂದ ವಿದ್ಯಾರ್ಥಿಗಳಿಗೆ ನೀಡಿದ ಮೊಟ್ಟ ಮೊದಲ ವಿಶೇಷ ಆ್ಯಪ್ ಇದಾಗಿದ್ದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೊಂಡಿಯಾಗಿದೆ.
ವಿಶೇಷತೆ ಏನು?: ಆ್ಯಪ್‌ಅನ್ನು ಸರಳವಾಗಿ ವಿನ್ಯಾಸ ಮಾಡಲಾಗಿದ್ದು, ವಿದ್ಯಾರ್ಥಿಗಳು ಸುಲಭವಾಗಿ ಬಳಸಬಹುದಾಗಿದೆ. ಆ್ಯಪ್‌ನಲ್ಲಿ ಪ್ರತಿ ತಿಂಗಳು ನಡೆದ ಆನ್‌ಲೈನ್ ಪ್ರಶ್ನೆ ಪತ್ರಿಕೆಗಳು, ಇ-ಕ್ಲಾಸ್ ಮಾದರಿ ಪ್ರಶ್ನೆ ಪತ್ರಿಕೆ, ಪ್ರಶ್ನೆ ಪತ್ರಿಕೆಯ ಬ್ಯಾಂಕ್ ಇರಲಿದೆ. ಜತೆಗೆ ಕಳೆದ ವರ್ಷ ಚಂದನ ವಾಹಿನಿಯಲ್ಲಿ ಪ್ರಸಾರವಾದ ವಿಡಿಯೋ ಪಾಠಗಳೂ ಇವೆ. ಪ್ರತಿ ವಿಷಯದ 250 ಬಹು ಆಯ್ಕೆಯ ಪ್ರಶ್ನೆಗಳಿವೆ. ಆ್ಯವರೇಜ್ ಸ್ಟೂಡೆಂಟ್ ಮತ್ತು ಬಿಲೋ ಆ್ಯವರೇಜ್ ಸ್ಟೂಡೆಂಟ್‌ಗಳನ್ನು ಪ್ರತ್ಯೇಕಿಸಿ, ಬಿಲೋ ಆ್ಯವರೇಜ್ ಸ್ಟೂಡೆಂಟ್ 40 ಅಂಕಗಳನ್ನು ಗಳಿಸುವ ಸಾಮರ್ಥ್ಯ ಪಡೆಯುವ ಪಾಸಿಂಗ್ ಪ್ಯಾಕೇಜ್ ಸಹ ಇರುವುದು ಇದರ ವಿಶೇಷ.
ಮಾರ್ಚ್‌ನಲ್ಲೇ ಪ್ರಯೋಗ; ವಿದ್ಯಾರ್ಥಿಗಳಿಗೆ ಸರಳವಾಗಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರ ಉತ್ತರ ಬರೆಯಬೇಕೆಂಬ ಉದ್ದೇಶದಿಂದ ಕಳೆದ ಮಾರ್ಚ್‌ನಲ್ಲೇ ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಸಿದ್ಧಗೊಳಿಸುವ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ ಮುಂದಾಗಿತ್ತು. ಕಾಕತಾಳೀಯ ಎಂಬಂತೆ ಪ್ರಸಕ್ತ ಸಾಲಿನ ಪರೀಕ್ಷೆ ಪೂರ್ಣ ಪ್ರಮಾಣದಲ್ಲಿ ಬಹು ಆಯ್ಕೆ ಮಾದರಿಯಲ್ಲಿಯೇ ನಡೆಯಲಿದೆ. ಇದರಿಂದ ಗ್ರಾಮಾಂತರ ಜಿಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಎದುರಿಸಲು ಇದು ಸಹಕಾರಿಯಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
13989 ವಿದ್ಯಾರ್ಥಿಗಳ ನೋಂದಣಿ: ಜಿಲ್ಲೆಯಲ್ಲಿ ಈ ಬಾರಿ 13989 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ದೇವನಹಳ್ಳಿಯಲ್ಲಿ 3344, ಹೊಸಕೋಟೆಯಲ್ಲಿ 3804, ದೊಡ್ಡಬಳ್ಳಾಪುರ 3792 ಹಾಗೂ ನೆಲಮಂಗಲದಲ್ಲಿ 3049 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 650 ವಿದ್ಯಾರ್ಥಿಗಳು ಪುನಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಜಿಲ್ಲೆಯ 106 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕೇಂದ್ರ ಗುರುತಿಸಲಾಗಿದೆ.
ವಿಷಯ ತಜ್ಞರು, ಶಿಕ್ಷಕರು ಸೇರಿ ಸಿದ್ಧಪಡಿಸಿರುವ ಜ್ಞಾನದೀಪ ಆ್ಯಪ್ ಈ ಬಾರಿ ಎಸ್ಸೆಸ್ಸೆಲ್ಸಿ ಬರೆಯಲಿರುವ ವಿದ್ಯಾರ್ಥಿಗಳಿಗೆ ಬಹಳ ನೆರವಾಗಲಿದೆ. ಈಗಾಗಲೇ ಈ ಬಾರಿ ಪರೀಕ್ಷೆ ಎದುರಿಸುತ್ತಿರುವ ಭಾಗಶಃ ವಿದ್ಯಾರ್ಥಿಗಳು ಇದರ ನೆರವು ಪಡೆದುಕೊಂಡಿದ್ದು ಆ್ಯಪ್ ಸಿದ್ಧಪಡಿಸಿದ್ದಕ್ಕೆ ಸಾರ್ಥಕವಾಯಿತು ಎನಿಸಿದೆ. ಗಂಗಮಾರೇಗೌಡ, ಡಿಡಿಪಿಐ