

ಔರಾದ್: ಪಠ್ಯಪುಸ್ತಕಗಳ ಜತೆ ಇತರೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಪ್ರತಿ ಗ್ರಾಮಕ್ಕೆ ಇರುವುದು ಅಗತ್ಯ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಷನ್ ನಿಂದ ಭಾನುವಾರ ಔರಾದ್ ಮತ್ತು ಕಮಲನಗರ ತಾಲೂಕಿನ ಗ್ರಾಪಂ ಗ್ರಂಥಾಲಯಗಳಿಗೆ ಓದುವ ಬೆಳಕು ಕಾರ್ಯಕ್ರಮಕ್ಕೆ ಪೂರಕವಾಗಿ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಗ್ರಂಥಾಲಯಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಅವುಗಳನ್ನು ಪುನಃ ಕಂಗೊಳಿಸುವಂತೆ ಫೌಂಡೇಷನ್ ಮಾಡುತ್ತಿದೆ ಎಂದರು.
ಫೌಂಡೇಷನ್ ಸಮನ್ವಯಾಧಿಕಾರಿ ಶಿವಾಜಿ ಬಿರಾದಾರ ಮಾತನಾಡಿ, ಗಡಿ ಭಾಗದಲ್ಲಿ ಶೈಕ್ಷಣಿಕವಾಗಿ ಮಕ್ಕಳು ಸಮರ್ಥರಾಗಬೇಕು ಮತ್ತು ಹತ್ತಾರು ಸಮಸ್ಯೆಗಳ ನಡುವೆಯೂ ಪುಟಿದೇಳುವಂಥ ಸಾಮಥ್ರ್ಯ ಬೆಳೆಸುವ ಉದ್ದೇಶದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಫೌಂಡೇಷನ್ ಗೆ ಗ್ರಂಥಪಾಲಕರು ಕೈಜೋಡಿಸಬೇಕು ಎಂದರು.
ಬಿಇಒ ಶಿವಕಾಂತ ಹಣಮಶೆಟ್ಟಿ ಮಾತನಾಡಿದರು. ತಾಪಂ ಇಒ ವೈಜಿನಾಥ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ವಿವಿಧ ಗ್ರಾಪಂ ಪಿಡಿಒ ಹಾಗೂ ಗ್ರಂಥಪಾಲಕರು ಪಾಲ್ಗೊಂಡಿದ್ದರು.