

ಮೈಸೂರು: ಶಿವರಾತ್ರಿ ಹಬ್ಬ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ವತಿಯಿಂದ ಆಯೋಜಿಸಿದ್ದ ಪ್ರಸಿದ್ಧ ಕಾಶಿ ವಿಶ್ವನಾಥ ದರ್ಶನ ಕಾರ್ಯಕ್ರಮ, ಜ್ಞಾನ ವಿಜ್ಞಾನ ದಿವ್ಯ ದರ್ಶನ ಮೇಳ ಭಾನುವಾರ ಸಂಜೆ ಸಂಪನ್ನಗೊಂಡಿತು.
ವಿಜಯನಗರ ಮೊದಲನೇ ಹಂತದ ಐಶ್ವರ್ಯ ಪೆಟ್ರೋಲ್ ಪಂಪ್ ಎದುರಿನ ಮುಡಾ ಖಾಲಿ ನಿವೇಶನದಲ್ಲಿ ನಿರ್ಮಾಣಗೊಂಡಿದ್ದ ಕಾಶಿ ವಿಶ್ವನಾಥ ಮಂದಿರದ ಪ್ರತಿರೂಪ ಪ್ರಮುಖ ಆಕರ್ಷಣೆಯಾಗಿತ್ತು.
ಫೆ.19ರಿಂದ ಉದ್ಘಾಟನೆಗೊಂಡಿದ್ದ ಈ ಕಾರ್ಯಕ್ರಮದ ವೀಕ್ಷಣೆಗೆ ಸಹಸ್ರಾರು ಜನರು ಭೇಟಿ ನೀಡಿದ್ದು ವಿಶೇಷ. ಅದರಲ್ಲೂ ಶಿವರಾತ್ರಿ ಹಬ್ಬ ದಿನ ಸಾರ್ವಜನಿಕರ ಭೇಟಿ ಹೆಚ್ಚಿತ್ತು.
ಇಲ್ಲಿದ್ದ 150 ಅಡಿ ಉದ್ದ, 50 ಅಡಿ ಎತ್ತರದ ಕಾಶಿ ವಿಶ್ವನಾಥ ಮಂದಿರದ ಪ್ರತಿಕೃತಿ ಕಣ್ತುಂಬಿಕೊಂಡರು. 21 ಅಡಿ ಎತ್ತರದ ಶಿವಲಿಂಗ, ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಕುಂಭಕರ್ಣ, ಗೃಹಸ್ಥದಲ್ಲಿ ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಮನಸ್ಸಿನ ಮಸಾಜ್ ಮಾಡುವ ಐದು ನಿಮಿಷಗಳ ಕಂಪ್ಯೂಟರ್ ಪ್ರೋಗ್ರಾಂ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರಿ ಸಾಧನೆಯ ಬಗ್ಗೆ ಸಮಾಲೋಚನೆ, ಮೌಲ್ಯ ಪ್ರಯೋಗ ವಿವರಿಸುವ ಆಟ, ಪ್ರತಿದಿನ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನೆ, ಧ್ಯಾನ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ದೇಶ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ವಿಜ್ಞಾನವನ್ನು ನಿರ್ಲಕ್ಷೃ ಮಾಡಿದ್ದೇ ಕಾರಣ. ಜಾತಿ-ಧರ್ಮ ಹೆಸರಿನಲ್ಲಿ ಸಮಾಜ ಮತ್ತು ಜನಸಮೂಹವನ್ನು ವಿಭಜಿಸಲಾಗಿದೆ. ಹೀಗಾಗಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಲು ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ದೇವರು ಪ್ರತಿಯೊಂದು ಜೀವಿಯಲ್ಲೂ ಇದ್ದಾನೆ. ಶರೀರ ಎನ್ನುವ ಮನೆಯಲ್ಲಿ ಭಗವಂತ ವಾಸಿಸುವ ಸ್ಥಳವಾಗಿದೆ. ಸ್ವಾರ್ಥ ಇದ್ದರೆ ಅಂತಹವರಲ್ಲಿ ದೇವರು ನೆಲೆಸುವುದಿಲ್ಲ. ಆತನ ದರ್ಶನಕ್ಕಾಗಿ ಯಾತ್ರೆಗಳಿಗೆ ಹೋಗಬೇಕಿಲ್ಲ. ಶ್ರದ್ಧೆ, ಭಕ್ತಿಯಿಂದ ನೋಡಿದಾಗಷ್ಟೇ ಭಗವಂತ ನಮ್ಮ ಆತ್ಮದಲ್ಲೇ ಇರುತ್ತಾನೆ ಎಂದು ಹೇಳಿದರು.
ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ ಬಿದರಿ ಮಾತನಾಡಿ, ಕೆಲಸ ಯಾವುದೇ ಇರಲಿ, ಅದನ್ನು ನಿಷ್ಠೆಯಿಂದ ಮಾಡಿದರೆ ದೇವರ ಸೇವೆ ಮಾಡಿದಂತಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ, ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಧೀಶೆ ಎಸ್.ರೇಖಾ ಇನ್ನಿತರರಿದ್ದರು.