ಜ್ಞಾನ ಬೆಳೆಸಿಕೊಳ್ಳಲು ಪ್ರವಾಸ ಸಹಕಾರಿ

23Kush02
Published on

ಕುಶಾಲನಗರ: ಕರ್ನಾಟಕ ದರ್ಶನ ಉಚಿತ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳು ರಾಜ್ಯದ ವಿವಿಧ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಅವುಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜಯವರ್ಧನ್ ಹೇಳಿದರು.


ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರ್ಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಅಭ್ಯಾಸದ ಜತೆ ವಿವಿಧ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸ ಮಾಡುವುದರಿಂದ ಜ್ಞಾನ ಹೆಚ್ಚುತ್ತದೆ ಎಂದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳಿಗೆ ರಾಜ್ಯದ ವಿವಿಧ ಜಿಲ್ಲೆಗಳ ಮಹತ್ವ, ವೈಜ್ಞಾನಿಕ, ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ, ವಿಜ್ಞಾನ ಮತ್ತು ಕೈಗಾರಿಕೆಗಳು, ಉದ್ಯಾನ, ಮ್ಯೂಸಿಯಂ, ಪ್ರಖ್ಯಾತ ವ್ಯಕ್ತಿಗಳು ಹುಟ್ಟಿದ ಊರುಗಳು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.


ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಈ ವರ್ಷ ಮತ್ತೆ ಆರಂಭಿಸಲಾಗಿದೆ. ಪ್ರತಿ ತಾಲೂಕಿನಿಂದ ನಾಲ್ಕು ದಿನಗಳ ಪ್ರವಾಸಕ್ಕೆ ಒಂದು ಬಸ್ ಸೌಲಭ್ಯ ಕಲ್ಪಿಸಲಾಗಿದೆ. 50 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಶಿಕ್ಷಣ ಸಂಯೋಜಕ ರಾಧಾಕೃಷ್ಣ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಕುಶಾಲನಗರದಿಂದ ಮೂರು ಬಸ್‌ನಲ್ಲಿ 150 ಮಕ್ಕಳು ಹಾಗೂ ಸೋಮವಾರಪೇಟೆಯಿಂದ ಎರಡು ಬಸ್‌ನಲ್ಲಿ 100 ಮಕ್ಕಳು ಸೇರಿದಂತೆ ಸೋಮವಾರಪೇಟೆ ತಾಲೂಕು ಬಿಇಒ ಕಚೇರಿ ಮೂಲಕ ಒಟ್ಟು 250 ವಿದ್ಯಾರ್ಥಿಗಳು ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹೇಳಿದರು.


ಶಿಕ್ಷಣ ಸಂಯೋಜಕ ಕೆ.ಬಿ.ರಾಧಾಕೃಷ್ಣ, ಎಚ್.ಆರ್.ಶೇಖರ್, ಪ್ರವಾಸದ ಜಿಲ್ಲಾ ನೋಡಲ್ ಅಧಿಕಾರಿ ವೆಂಕಟೇಶ್, ಮಾರ್ಗದರ್ಶಕರಾದ ಮಹೇಶ್, ಚನ್ನರಸ, ಪ್ರವಾಸ ಮಾರ್ಗದರ್ಶಿ ಶಿಕ್ಷಕರು ಹಾಗೂ ವಿವಿಧ ಶಾಲಾ ಶಿಕ್ಷಕರು ಇದ್ದರು.


ಪ್ರವಾಸದ ವೀಕ್ಷಣೆ ಸ್ಥಳಗಳ ವಿವರ:
1 ನೇ ದಿನ : ಬೇಲೂರು,ಹಳೇಬೀಡು, ಶ್ರವಣಬೆಳಗೊಳ( ವಾಸ್ತವ್ಯ)
2 ನೇ ದಿನ : ಚಿತ್ರದುರ್ಗ ಮತ್ತು ಟಿ.ಬಿ.ಡ್ಯಾಂ( ವಾಸ್ತವ್ಯ)
3 ನೇ ದಿನ : ಹಂಪಿ ಸುತ್ತಮುತ್ತ ಮತ್ತು ಐಹೊಳೆ (ವಾಸ್ತವ್ಯ)
4 ನೇ ದಿನ : ಪಟ್ಟದಕಲ್ಲು, ಬಾದಾಮಿ, ಮಹಾಕೂಟ ವೀಕ್ಷಣೆ ನಂತರ ಸೋಮವಾರ ಬೆಳಗ್ಗೆ 6 ಗಂಟೆಗೆ ಜಿಲ್ಲೆಗೆ ವಾಪಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net