

ಬಸವಕಲ್ಯಾಣ: ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಪರಿಸರದಲ್ಲಿ ಏಪ್ರಿಲ್ ೫ ಮತ್ತು ೬ರಂದು ಶರಣೆ ದಾನಮ್ಮ ಉತ್ಸವ ಉತ್ಸವ ಆಯೋಜಿಸಲಾಗಿದೆ ಎಂದು ಬಸವ ತತ್ವ ಪ್ರಸಾರ ಮತ್ತು ಪ್ರಚಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ ಹೇಳಿದರು.
ಐತಿಹಾಸಿಕ ಅಲ್ಲಮಪ್ರಭು ದೇವರ ಗದ್ದಿಗೆ ಮಠದಲ್ಲಿ ಶನಿವಾರ ಲಿಂಗಯೋಗ ಮಾಡುವುದರ ಮೂಲಕ ಶರಣೆ ದಾನಮ್ಮ ಜ್ಞಾನ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಬಸವ ಧರ್ಮ ಪ್ರಚಾರಾರ್ಥವಾಗಿ ಕಳೆದ ೧೩ ವರ್ಷದಿಂದ ಶರಣೆ ದಾನಮ್ಮ ಜ್ಞಾನ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಂಡು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಐದು ಜಿಲ್ಲೆಗಳ ನೂರಾರು ಊರುಗಳಲ್ಲಿ ಪ್ರಚಾರ ಮಾಡಿದ್ದಾರೆ, ಬಸವತತ್ವವನ್ನು ಉಳಿಸಿ ಬೆಳೆಸುವಲ್ಲಿ ಶ್ರಮ ವಹಿಸುತ್ತಿದ್ದಾರೆ ಎಂದರು.
ಗುಣತೀರ್ಥವಾಡಿ-ನಾರಾಯಣಪುರವನ್ನು ದಾನಮ್ಮನ ತಪೋಕ್ಷೇತ್ರವೆಂದು ಗುರುತಿಸಿ ಅಲ್ಲಿ ಕಲ್ಯಾಣ ಮಹಾಮನೆಯನ್ನು ಕಟ್ಟಿ, ಪ್ರತಿವರ್ಷ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಗಾಗಿ ದಾನಮ್ಮನ ಐಕ್ಯ ಕ್ಷೇತ್ರ ಗುಡ್ಡಾಪುರದಿಂದ, ಸೊಲ್ಲಾಪುರ ಸಿದ್ಧರಾಮೇಶ್ವರದಿಂದ, ಕೊಲ್ಲಾಪೂರ ಜಿಲ್ಲೆಯ ಅಲ್ಲಮಗಿರಿಯಿಂದ ಜ್ಯೋತಿಯನ್ನು ಹೊತ್ತಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಜ್ಯೋತಿ ಯಾತ್ರೆಯ ರೂವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದಲ್ಲಿ ಗುರು ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಮಹಾಶರಣೆ ದಾನಮ್ಮನವರು ಅದ್ಭುತ ಲಿಂಗಯೋಗಿಗಳಾಗಿದ್ದರು. ಬೇಡಿದವರಿಗೆ ಇಷ್ಟಾರ್ಥವನ್ನು ಈಡೇರಿಸುವ ವರದಾನಿಯಾಗಿದ್ದರು. ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳನ್ನು ಮಾಡಿ ಜನಮಾನಸದ ಹೃದಯದಲ್ಲಿ ಶಾಶ್ವತ ನೆಲೆ ನಿಂತಿದ್ದಾರೆ ಎಂದರು.
ಮಹಾಶರಣೆ ದಾನಮ್ಮನವರು ಕಲ್ಯಾಣಕ್ಕೆ ಬಂದ ಕುರುಹುಗಳಿರಲಿಲ್ಲ. ಇತ್ತೀಚೆಗೆ ಕಂಡುಕೊಂಡಿದ್ದು, ಗುಣತೀರ್ಥವಾಡಿಯನ್ನು ದಾನಮ್ಮನ ತಪೋಸ್ಥಾನವೆಂದು ಘೋಷಿಸಿದ್ಧೇವೆ. ಈ ಕ್ಷೇತ್ರವನ್ನು ಪವಿತ್ರ ಧಾರ್ಮಿಕ ಶರಣ ಕ್ಷೇತ್ರವಾಗಿಸಲು ನಾನು ಸಂಕಲ್ಪ ಮಾಡಿರುವೆ. ಈ ಕಾರಣವಾಗಿ ಸತತ ೧೩ ವರ್ಷದಿಂದ ಪ್ರಯತ್ನಿಸಿದ ಫಲವಾಗಿ ಅದು ಸಾಧ್ಯವಾಗಿದೆ. ದಾನಮ್ಮನ ಉತ್ಸವನ್ನು ಶರಣ ಜ್ಞಾನವನ್ನು ಬಿತ್ತರಿಸುವ ಅನುಭವ ಮಂಟಪದ ಉತ್ಸವಾಗಿ, ಕಲ್ಯಾಣದ ಹಬ್ಬವಾಗಿ ಆಚರಿಸಬೇಕೆಂದು ಸಂಕಲ್ಪವಿದೆ ಎಂದರು.
ಕಲ್ಯಾಣ ಮಹಾಮನೆಯ ಶ್ರೀ ನಿಜಲಿಂಗ ದೇವರು ಪ್ರಾಸ್ತಾವಿಕ ಮಾತನಾಡಿ, ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಹಮ್ಮಿಕೊಂಡ ಜ್ಯೋತಿ ಯಾತ್ರೆ ಆಡಂಬರದ ಪಾದಯಾತ್ರೆಯಾಗಿರದೆ ಜನರನ್ನು ಧಾರ್ಮಿಕವಾಗಿ ಪರಿವರ್ತಿಸುವ ಜ್ಞಾನ ಜ್ಯೋತಿ ಯಾತ್ರೆಯಾಗಿದೆ. ೨೫ ದಿನ ನಡೆಯಲಿರುವ ಜ್ಞಾನಜ್ಯೋತಿ ಯಾತ್ರೆಯಲ್ಲಿ ಪ್ರವಚನ, ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಉಚಿತವಾಗಿ ಲಿಂಗದೀಕ್ಷೆ ಮಾಡಲಾಗುತ್ತದೆ ಸರ್ವರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ಪಾಟೀಲ್ ಮಾತನಾಡಿದರು. ಸವಿತಾ ರಗಟೆ ಪೂಜೆ ನೆರವೇರಿಸಿದರು. ಗಿರಿಜಾ ಹಂಗರಗೀಕರ್ ಸ್ವಾಗತಿಸಿದರು. ದೀಪ್ತಿ ಬಿರಾದಾರ ವಂದಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ನೀಲಕಂಠಯ್ಯ ಸ್ವಾಮಿ, ಗಣಪತಿ ಖಸಗೆ, ರಾಮ ಮಜ್ಜಿಗೆ, ಡಾ. ಬಸವರಾಜ ಮೂಲಗೆ, ಸರಸ್ವತಿ ಹೋದಲೂರೆ, ಸಿದ್ಧರಮಪ್ಪ ಹಂಗರಗಿಕರ್, ರೇಣುಕಾ ಮಾಮಾ, ಸುಮಿತ್ರಾ ದಾವಣಗಾವೆ, ಗುಣತೀರ್ಥವಾಡಿಯ ಸವಿತಾ, ಜಯಶ್ರೀ, ಅಂಬರೇಶ ಇತರರಿದ್ದರು.