ಜ್ಞಾನ ಒದಗಿಸುವ ಮಾರ್ಗ ಶಿಕ್ಷಣ ವ್ಯವಸ್ಥೆ

na someshwara
Published on

ಸಾಗರ: ಶಿಕ್ಷಣ ವ್ಯವಸ್ಥೆಯು ಜ್ಞಾನವನ್ನು ಒದಗಿಸುವ ಮಾರ್ಗ ಎಂಬ ಅಂಶದ ಹೊರತಾಗಿ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅಂಕಗಳೇ ಮಾನದಂಡವಾಗಿದೆ. ಆದ್ದರಿಂದ ಓದಿನ ಜತೆಗೆ ಎಲ್ಲ ರೀತಿ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸಿದ್ಧರಿರಬೇಕು ಎಂದು ಲೇಖಕ ಡಾ. ನಾ.ಸೋಮೇಶ್ವರ ಹೇಳಿದರು.

ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿ ಇಕ್ಕೇರಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕಾಲಘಟ್ಟದಲ್ಲಿ ಅಂಕಗಳು ಮುಖ್ಯ. ಸದ್ಯಕ್ಕೆ ನೀವು ಅದಕ್ಕೆ ಪ್ರಾಮುಖ್ಯ ಕೊಡಿ. ಜ್ಞಾನವನ್ನು ಹಂತಹಂತವಾಗಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಪಂಚೇಂದ್ರಿಯಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬಾಲ್ಯದಿಂದ ಕರಗತ ಮಾಡಿಕೊಳ್ಳಬೇಕು. ಊಟ, ನಿದ್ದೆ ಮಿತವಾಗಿದ್ದರೆ ಹಿತ. ಇದು ಹೆಚ್ಚಿದಷ್ಟೂ ಆರೋಗ್ಯಕ್ಕೆ, ವಿದ್ಯಾಭ್ಯಾಸಕ್ಕೆ ಮಾರಕ. ಮೆದುಳಿನ ಕ್ರಿಯಾಶೀಲತೆಗೆ ನಾವು ಚಟುವಟಿಕೆಯಿಂದ ಇರುವುದು ಕೂಡ ಪ್ರಮುಖವಾಗುತ್ತದೆ. ಆಹಾರ ಪದ್ಧತಿ ನಮ್ಮ ಓದನ್ನು ಪ್ರಭಾವಿಸುತ್ತದೆ ಎಂಬುದು ನಮ್ಮ ಗಮನದಲ್ಲಿರಬೇಕು ಎಂದರು.

ಕಂಪ್ಯೂಟರ್‌ನಲ್ಲಿ ಒಮ್ಮೆ ದಾಖಲಿಸಿ ಸೇವ್ ಕೊಟ್ಟರೆ ಅದು ನಿರಂತರವಾಗಿ ನೆನಪಿಟ್ಟುಕೊಳ್ಳುತ್ತದೆ. ಹಾಗೆ ನಮ್ಮ ಮೆದುಳು ಏಕೆ ಕೆಲಸ ಮಾಡುವುದಿಲ್ಲ ಎಂಬ ಹಿನ್ನೆಲೆಯಲ್ಲಿ ವಿಜ್ಞಾನಿಗಳೂ ಕೂಡ ಅಧ್ಯಯನ ನಡೆಸಿದ್ದಾರೆ. ಮರೆಯಬಾರದು ಅಂದರೆ ಆ ದಿನ ಕಲಿತಿದ್ದನ್ನು ಸಂಜೆ ಮನೆಗೆ ಹೋಗಿ ಮನನ ಮಾಡಿ, ಬರೆದು ಮೆದುಳಿನಲ್ಲಿ ಸಂಗ್ರಹಿಸಬೇಕು. ಎಸ್‌ಎಸ್‌ಎಲ್‌ಸಿ ಮಕ್ಕಳಂತು ಆ ವರ್ಷದ ಮೊದಲ ದಿನದಿಂದ ಪರೀಕ್ಷೆಗೆ ತಯಾರಿ ನಡೆಸಬೇಕು. ಈ ಸಿದ್ಧತೆ ವೌಲ್ಯೀಕರಣ ಪ್ರತಿ ತಿಂಗಳಿಗೊಮ್ಮೆ ನಡೆಯಬೇಕು. ಹೀಗಾದಲ್ಲಿ ಉತ್ತಮ ಲಿತಾಂಶ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಕ್ಕೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಟಿ.ರತ್ನಾಕರ್, ಸಾಗರದ ರವೀಂದ್ರ ಪುಸ್ತಕಾಲಯದ ಮುಖ್ಯಸ್ಥ ವೈ.ಎ.ದಂತಿ, ಜೆ.ಆರ್.ವೆಂಕಟೇಶ್, ರಾಮಮೂರ್ತಿ ಬೆಳೆಯೂರು, ಎಸ್.ಜಿ.ಶ್ರೀಕಾಂತ್, ಎಚ್.ಉಮೇಶ್, ಸಂಕೇತ್ ಹುಲಿಮನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net