

ಚಿತ್ರದುರ್ಗ: ಬೇಡಜಂಗಮರು ವಿಚಾರವಂತರು. ಅನೇಕ ವಿದ್ಯಾರ್ಥಿಗಳು ಮಠಮಾನ್ಯಗಳ ಪ್ರಸಾದ ನಿಲಯಗಳಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಹೀಗಾಗಿ ಜ್ಞಾನ, ಅನ್ನದಾಸೋಹ ಅತ್ಯಂತ ಶ್ರೇಷ್ಠತೆ ಪಡೆದಿವೆ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಶ್ರೀ ಹೇಳಿದರು.
ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ-ತಾಲೂಕು ಬೇಡಜಂಗಮ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ, ಶಿಷ್ಯ ವೇತನ ವಿತರಣಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ನಿಜಕ್ಕೂ ಶ್ಲಾಘನೀಯ. ಜಂಗಮತ್ವದ ಸಂಸ್ಕೃತಿಯಿಂದ ಜಂಗಮರನ್ನು ಗುರು ಸ್ಥಾನದಲ್ಲಿಟ್ಟ ಕೀರ್ತಿ ಸಮಸ್ತ ಸಮುದಾಯರಿಗೆ ಸಲ್ಲುತ್ತದೆ. ಸಂಸ್ಕಾರ, ನಯವಿನಯ ಶ್ರೀಮಂತಿಕೆಗಿಂತಲೂ ಮಿಗಿಲು. ಸರ್ವರಿಗೂ ಸಮಪಾಲು ಸಮಬಾಳು ಎಂಬಂತೆ ಒಟ್ಟಾಗಿ ಕಾಯಕದಲ್ಲಿ ತೊಡಗಿ ನೆಮ್ಮದಿ, ಆರೋಗ್ಯವಂತ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಜಂಗಮ ಸಂಸ್ಕೃತಿಯನ್ನು ಗೌರವಿಸುವುದು ಕಡಿಮೆಯಾಗುತ್ತಿದ್ದು, ಮೊದಲಿನಂತಾಗಬೇಕು. ನಿಮ್ಮ ಮೀಸಲಾತಿ ಹೋರಾಟ ಮುಂದುವರೆದಿದೆ. ಸ್ವಾತಂತ್ರೃ ಪೂರ್ವದಿಂದಲೂ ಮಠಮಾನ್ಯಗಳು ವಿದ್ಯಾದಾನ ಮಾಡುತ್ತ ಬಂದಿದೆ. ದೇಶ-ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಅನೇಕ ಸೌಲಭ್ಯ ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ವಿದ್ಯೆ ಎಂಬ ಚೈತನ್ಯವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದ ಸಮಾಜ ಇದಾಗಿದೆ. ಪ್ರತಿಯೊಬ್ಬರ ಸಾಧನೆಯ ಹಿಂದೆ ಈ ಸಮುದಾಯದ ಪರಿಶ್ರಮವಿದೆ. ಪರೀಕ್ಷೆಗಿಂತಲೂ ಜೀವನಾನುಭವದ ಅಂಕಪಟ್ಟಿ ದೊಡ್ಡದಾಗಿದ್ದು, ಅದರಲ್ಲಿ ಸಾಧಕರಾಗಿ. ಉತ್ತಮ ಗುರಿ, ನಿರೀಕ್ಷೆಯೊಂದಿಗೆ ಸುಂದರ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಜಂಗಮರು ನಿತ್ಯವೂ ಚಲನಶೀಲರು. ವಿದ್ಯೆ, ದಾಸೋಹದ ಪರಿಕಲ್ಪನೆಯನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಕೀರ್ತಿ ಈ ಸಮಾಜಕ್ಕೆ ಸಲ್ಲುತ್ತದೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯ 21, ದ್ವಿತೀಯ ಪಿಯುಸಿಯ 18, ಪಿಎಚ್‌ಡಿ ಮತ್ತು ಸಂಶೋಧನಾರ್ಥಿಗಳ ಪೈಕಿ ತಲಾ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಲಾಯಿತು.
ಬೇಡಜಂಗಮ ಸಮಾಜದ ಅಧ್ಯಕ್ಷ ಸೋಮಶೇಖರ ಮಂಡಿಮಠ, ಪದಾಧಿಕಾರಿಗಳಾದ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಕೆ.ಎಂ.ವೀರೇಶ್, ಕೆ.ಎಸ್.ಶಿವನಗೌಡ್ರು, ವಿವಿಧ ಸಮಾಜದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ, ಜೆ.ಶಿವಪ್ರಕಾಶ್, ಇ.ಎಸ್. ಜಯದೇವಮೂರ್ತಿ, ದಯಾನಂದ, ಡಿ.ಎಸ್.ಸುರೇಶ್‌ಬಾಬು, ಎಂ.ಬಿ.ಚನ್ನಬಸವನಗೌಡ, ಕೆ.ಸಿ.ಗಂಗಾಧರಪ್ಪ, ಉದ್ಯಮಿ ಪಟೇಲ್ ಶಿವಕುಮಾರ್, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್‌ಕುಮಾರ್, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್, ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ಜಿ.ಎಸ್.ಕಲ್ಲೇಶಯ್ಯ, ಕೆ.ಎಸ್.ಕಲ್ಮಠ್, ಎಚ್.ಪ್ರಭುಲಿಂಗಯ್ಯ, ಸಿ.ಎಂ.ಸ್ವಾಮಿ, ಟಿ.ಶಿವಣ್ಣ, ಕರಿಸಿದ್ಧಯ್ಯ, ಕೆಪಿಎಂ ಗಣೇಶಯ್ಯ, ಎಸ್.ಷಡಾಕ್ಷರಯ್ಯ, ಬಸವರಾಜ, ಪಿ.ಚಿನ್ನಾಂಬೆ, ಪಿ.ಬಸವರಾಜಯ್ಯ, ಸೋಮಶೇಖರಯ್ಯ ಇತರರಿದ್ದರು.