ಜೋಳದ ಬಿತ್ತನೆಯೇ ಆಗಿಲ್ಲ

HSD Hesaru bele 20 P1
Published on

ಹೊಸದುರ್ಗ: ಅನಾವೃಷ್ಟಿಯಿಂದ ಮುಂಗಾರು ಬೆಳೆಗಳು ಸಂಪೂರ್ಣ ವಿಫಲವಾಗಿವೆ. ಹಿಂಗಾರು ಬಿತ್ತನೆ ಪ್ರದೇಶ ಕೂಡ ಕಡಿಮೆಯಾಗಿದೆ.

ವಾಡಿಕೆಯಂತೆ ಅಗಸ್ಟ್ ಅಂತ್ಯಕ್ಕೆ 307 ಮಿ.ಮೀ ಮಳೆ ಆಗಬೇಕಿತ್ತು. 253 ಮಿ.ಮೀ.ಮಾತ್ರ ಆಗಿದೆ. ಆದರೆ ಸಕಾಲಕ್ಕೆ ಮಳೆಯಾಗಿಲ್ಲ. ಹೀಗಾಗಿ ಹೆಸರು, ಎಳ್ಳು , ಮುಂಗಾರು ಸಾವೆ ಸೇರಿ ಬಹುತೇಕ ಬೆಳೆಗಳು ಸಂಪೂರ್ಣ ಹಾಳಾಗಿವೆ.

ಬಿತ್ತನೆ ಬೀಜ,ಗೊಬ್ಬರ ಹಾಗೂ ಕೃಷಿ ಕಾರ್ಯಕ್ಕೆ ಮಾಡಿದ ವೆಚ್ಚವೂ ಬರದಂತಾಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ತಾಲೂಕಿನ ಪ್ರಮುಖ ಬೆಳೆ ರಾಗಿ ಬಿತ್ತನೆಯೂ ಕುಂಠಿತವಾಗಿದೆ. 26.500 ಹೆಕ್ಟೆರ್ ಗುರಿಗೆ ಪ್ರತಿಯಾಗಿ 16,500 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ.

ಜೋಳದ ಬಿತ್ತನೆಯೇ ಆಗಿಲ್ಲ, ಸಿರಿಧಾನ್ಯಗಳಾದ ಸಾವೆ, ನವಣೆ ಪ್ರಮಾಣ ಕೂಡ ಕುಸಿದಿದೆ. ಹೀಗಾಗಿ ಜಾನುವಾರುಗಳ ಮೇವಿಗೂ ಕೊರತೆಯಾಗುವ ಸಂಭವವಿದೆ.

1400 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಇತ್ತಾದರೂ 130 ಹೆಕ್ಟರ್ ಮಾತ್ರ ಸಾಧ್ಯ ಆಗಿದೆ. ಹತ್ತಿ 410 ಹೆಕ್ಟರ್‌ನಷ್ಟು ಬಿತ್ತನೆಯಾಗಿದೆ. ಹುರುಳಿ, ಉದ್ದು, ಸಜ್ಜೆ ,ಹುಚ್ಚೆಳ್ಳು, ಸಾಸಿವೆ ಬೆಳೆಗಳ ಬಿತ್ತನೆ ಶೂನ್ಯವಾಗಿದೆ. ತಾಲೂಕಿನ ನಾಲ್ಕು ಹೋಬಳಿಗಳಲ್ಲೂ ಬರದ ಸ್ಥಿತಿ ಗಂಭೀರವಾಗಿದೆ.

ಬರದ ಪರಿಸ್ಥಿತಿ ಗಂಭೀರವಾಗುತ್ತಿದೆ. ಮುಂಗಾರು ಬೆಳೆಗಳು ಸಂಪೂರ್ಣವಾಗಿ ವಿಫಲವಾಗಿವೆ. ರಾಗಿ ಬಿತ್ತನೆ ಪ್ರದೇಶ ಕುಸಿದಿದೆ. ಬರದ ಪಟ್ಟಿಯಲ್ಲಿ ಸೇರಿರುವ ಹೊಸದುರ್ಗ ತಾಲೂಕಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು.- ಕೊರಟಿಕೆರೆ ಮಹೇಶ್ವರಪ್ಪ, ರೈತ, ಹೊಸದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net