ಜೋಳ ತಿಂದವನು ತೋಳವಾದ.. - ಸಿರಿಧಾನ್ಯ ಜಾಗೃತಿ ನಡಿಗೆ

dvg-siridhanya-nadige-jan-4.jpg
Published on

ದಾವಣಗೆರೆ: ಬೇಕು ಅಂದ್ರೆ ಒಳ್ಳೇ ನಿದ್ದೆ, ನುಂಗ್ಬೇಕಣ್ಣ ರಾಗಿಮುದ್ದೆ, ಜೋಳ ತಿಂದವನು ತೋಳವಾದ, ಅಕ್ಕಿ ತಿಂದವನು ಹಕ್ಕಿಯಾದ, ಬರಗು ತಿಂದರೆ ಜಡ್ಡ (ಅನಾರೋಗ್ಯ ಬೀಳಲ್ಲ), ರಾಗಿ ತಿಂದವರು ನಿರೋಗಿ, ಊದಲು ನಾರಿನಿಂದ ಸಮೃದ್ಧ ಸಕ್ಕರೆ ರೋಗಿಗಳಿಗೆ ರಾಮಬಾಣ, ಸಾಮೆ ತಿಂದವರು ಆಮೆಯಂತೆ ದೀರ್ಘಾಯುಷಿಯಾಗುವರು, ದಿನಾ ನವಣಕ್ಕಿ ಉಣ್ಣುವವರಿಗೆ ಬೊಜ್ಜು ಮೈ ಬರುವುದಿಲ್ಲ...

ಸಿರಿಧಾನ್ಯದ ನಡಿಗೆ ಆರೋಗ್ಯದ ಕಡೆಗೆ ಶೀರ್ಷಿಕೆಯಡಿ ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಜಾಗೃತಿ ಜಾಥಾದಲ್ಲಿ ಕಂಡುಬಂದ ಫಲಕಗಳ ಬರಹಗಳಿವು.

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ, ಕೃಷಿಕ ಸಮಾಜದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ನಡಿಗೆ ಕಾರ್ಯಕ್ರಮದಲ್ಲಿ ಶ್ವೇತವರ್ಣದ ಟಿಶರ್ಟ್ ಧರಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹೆಜ್ಜೆ ಹಾಕಿದರು.

ಜಯದೇವ ವೃತ್ತದಲ್ಲಿ ಚಾಲನೆಗೊಂಡ ನಡಿಗೆ, ಆರ್.ಎಚ್. ಕಲ್ಯಾಣ ಮಂಟಪ, ಹಳೇ ಪಿ.ಬಿ.ರಸ್ತೆ, ಎ.ವಿ.ಕೆ ಕಾಲೇಜು ರಸ್ತೆ, ರಾಂ ಆ್ಯಂಡ್ ಕೋಡ ವೃತ್ತ, ಚರ್ಚ್ ರಸ್ತೆ ಮಾರ್ಗವಾಗಿ ಗುಂಡಿ ಮಹದೇವಪ್ಪ ವೃತ್ತ ತೆರಳಿತು. ನಂತರ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಅಂತ್ಯಗೊಂಡಿತು.

ಆಗಸದೆತ್ತರಕ್ಕೆ ಬೆಲೂನ್‌ಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸಿರಿಧಾನ್ಯ ಸೇವನೆಯೊಂದಿಗೆ ಪೂರ್ವಜನರು ದೀರ್ಘಾಯುಷ್ಯದ ಬದುಕು ಕಂಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಜೋಳ, ರಾಗಿ, ನವಣೆ, ಸಜ್ಜೆ, ಊದಲು ಮುಂತಾದ ಸಿರಿಧಾನ್ಯಗಳನ್ನು ಬಳಸಬೇಕು ಎಂದು ಹೇಳಿದರು.

ಸಿರಿಧಾನ್ಯದಲ್ಲಿ ಕ್ಯಾಲ್ಸಿಯಂ, ವಿಟಮಿನ್, ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ಮಧುಮೇಹ, ಬಿಪಿ, ಹೃದಯ ತೊಂದರೆ, ಕಿಡ್ನಿ ಸಮಸ್ಯೆಯನ್ನು ಹತೋಟಿಯಲ್ಲಿ ಇರಿಸಬಹುದು. ಜಾಗೃತಿ ನಡಿಗೆ ಆದರೆ ಸಾಲದು. ಸಿರಿಧಾನ್ಯ ಸೇವನೆ ನಿತ್ಯ ರೂಢಿಯಾಗಬೇಕು ಎಂದು ಹೇಳಿದರು.

ಜಿಪಂ ಸಿಇಒ ಸುರೇಶ ಇಟ್ನಾಳ್ ಮಾತನಾಡಿ, ಅಪೌಷ್ಟಿಕ ಸಮಸ್ಯೆಯಲ್ಲಿದ್ದವರು ಸಿರಿಧಾನ್ಯ ನೆರವಾಗಲಿದೆ. ಇದರ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಸಿರಿಧಾನ್ಯಗಳನ್ನು ಬೆಳೆಯಬೇಕು. ರಾಸಾಯನಿಕ ಗೊಬ್ಬರವಿಲ್ಲದೆ ಇದನ್ನು ಬೆಳೆಸುವುದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಹಸೀಲ್ದಾರ್ ಡಾ.ಬಿ.ಎನ್. ಅಶ್ವತ್ಥ, ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net