

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಜೋರು ಮಳೆ ಸುರಿದಿದ್ದು, ಮರಗಳು ಬಿದ್ದು ವಿದ್ಯುತ್ ಕಂಬಗಳು ಹೋಗಿವೆ.
ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದ ಪರಿಣಾಮ ಹೋಬಳಿ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಡಿತವಾಗಿದೆ. ಸಮೀಪದ ಕಕ್ಕಬೆಯ ನಾಲಾಡಿ ಗ್ರಾಮದ ಕೋಡಿಮನಿಯಂಡ ರಸ್ತೆಯಲ್ಲಿ ಮರ ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ಮೂರು ಲೈಟ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಹೊದ್ದೂರು ಗ್ರಾಮದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಮಳೆ ಗಾಳಿಗೆ ಮರ ಮುರಿದು ಬಿದ್ದು ಕೆಲವು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಕಕ್ಕಬ್ಬೆ ಪ್ರೌಢಶಾಲೆ ಮುಖ್ಯದ್ವಾರದ ಬಳಿ ಹೈಟೆನ್ಶನ್ ತಂತಿಗಳ ಮೇಲೆ ಗಾಳಿ ಮಳೆಗೆ ಮರ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿ ಅಪಾಯ ಮಟ್ಟದಲ್ಲಿದ್ದು ಆತಂಕಕ್ಕೆ ಕಾರಣವಾಗಿದೆ.