

ಕೊಕ್ಕರ್ಣೆ ಹಲವು ವರ್ಷಗಳ ಹಿಂದೆ ಪಾಳು ಬಿದ್ದ ಇತಿಹಾಸ ಪ್ರಸಿದ್ಧ ಸೀತಾನದಿ ತಟದಲ್ಲಿ ದಟ್ಟಾರಣ್ಯದ ನಡುವಿನ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ಜೋಮ್ಲು ಕ್ಷೇತ್ರ ಬೊಬ್ಬರ್ಯ ಸಾನ್ನಿಧ್ಯ ಇದೀಗ ಎಲ್ಲರ ಸಹಕಾರದಲ್ಲಿ ಜೀರ್ಣೋದ್ಧಾರಗೊಂಡು ಭಕ್ತರ ಪಾಲಿನ ಶಕ್ತಿ ಸಾನ್ನಿಧ್ಯವಾಗಿ ಪ್ರಸಿದ್ಧಿ ಪಡೆದಿದೆ.
*ಕ್ಷೇತ್ರ ಪುರಾಣ: ತ್ರೇತಾಯುಗದಲ್ಲಿ ರಾಮನ ಮಡದಿ ಸೀತೆ ಕಣ್ಣೀರಿನಿಂದ ಸೀತಾ ನದಿ ಹುಟ್ಟಿತು. ರಾಮನ ಶಕ್ತಿಯಿಂದ ಕಾಶಿ ರಾಮೇಶ್ವರದ ತೀರ್ಥಕ್ಕೆ ಸಮನಾಗಿ ಸೀತಾನದಿಯೂ ಪವಿತ್ರ ಶಕ್ತಿ ಹೊಂದಿದೆ ಎಂಬ ಪ್ರತೀತಿ ಇದೆ. ಸೀತಾನದಿ ತಟದಲ್ಲಿ ಬೇಟೆಯಾಡಲು ಬಂದ ಶೌಭರನು ನದಿ ತಟದಲ್ಲಿ ಮಲಗಿರುವಾಗ ಆತನ ಕನಸಿನಲ್ಲಿ ಮಹಿಷಮರ್ಧಿನಿ ದರ್ಶನ ನೀಡಿ ಅಲ್ಲೇ ತಪಸ್ಸು ಮಾಡಿ ಪುಣ್ಯ ಕ್ಷೇತ್ರ ನಿರ್ಮಾಣಕ್ಕೆ ಅಭಯ ನೀಡುತ್ತಾಳೆ. ಶೌಭರನ ರಕ್ಷಣೆಗೆ ಬೊಬ್ಬರ್ಯ ದೈವವನ್ನು ನೇಮಿಸುತ್ತಾಳೆ. ತಪಸ್ಸಿನಲ್ಲಿರುವ ಶೌಭರನಿಗೆ ಉಮ್ಮಲ್ತಿ ತೊಂದರೆ ಕೊಟ್ಟಾಗ ಬೊಬ್ಬರ್ಯ ದೈವ ರಕ್ಷಣೆ ನೀಡುತ್ತದೆ. ಬಳಿಕ ಪುಣ್ಯ ಎಳ್ಳಾಮಾವಾಸ್ಯೆಯ ದಿನ ಶೌಭರನಿಂದ ಪ್ರತಿಷ್ಠಿತವಾದ ಬೊಬ್ಬರ್ಯ ದೈವವಾಗಿ ನೆಲೆಯಾಗಿ ನಿಂತು ತೀರ್ಥಕ್ಷೇತ್ರವಾಗುತ್ತದೆ ಎಂಬುದು ಐತಿಹ್ಯ.
ಎಳ್ಳಮಾವಾಸ್ಯೆ ದಿನ ಸೀತಾನದಿಯಲ್ಲಿ ತೀರ್ಥ ಉದ್ಭವವಾಗುತ್ತದೆ. ಅಂದು ಸೀತಾನದಿಯಲ್ಲಿ ಸ್ನಾನ ಮಾಡಿದರೆ ಪಾಪಕರ್ಮ, ರೋಗ ರುಜಿನಗಳು ದೂರವಾಗಿ ಕಾಶಿ ಕ್ಷೇತ್ರದ ಯಾತ್ರೆ ಮಾಡಿದಷ್ಟು ಪುಣ್ಯ ಬರುತ್ತದೆ ಎಂಬುದು ನಂಬಿಕೆ. ಇದೇ ಸ್ಥಳದಲ್ಲಿ ಜೋಮೇರು ಋಷಿಗಳು ದೀರ್ಘಕಾಲ ತಪಸ್ಸು ಮಾಡಿದ್ದರಿಂದ ಈ ಪ್ರದೇಶ ಜೋಮ್ಲು ತೀರ್ಥ ಎಂಬ ಹೆಸರು ಬಂತು. ಬಾರ್ಕೂರು ಮತ್ತು ಸೂರಾಲು ರಾಜ ವಂಶಸ್ಥರು ಜೋಮ್ಲು ಕ್ಷೇತ್ರದಲ್ಲಿ ಅನ್ನದಾನ ಮಾಡುತ್ತಿದ್ದರು.
ನೂರು ವರ್ಷಕ್ಕೂ ಹಿಂದೆ ಚಾರ ದೊಡ್ಮನೆ ಶಿವರಾಮ ಶೆಟ್ಟಿ, ಮಾರಾಳಿ ಭುಜಂಗ ಶೆಟ್ಟಿ, ಹೇರಳೆ ತೇಜಪ್ಪ ಶೆಟ್ಟಿ ಈ ಮೂರು ಮನೆತನದವರು ಸೇರಿಕೊಂಡು ವಾರ್ಷಿಕ ಜಾತ್ರೋತ್ಸವವನ್ನು ಮಾಡಿಕೊಂಡು ಬರುತ್ತಿದ್ದರು. ತಮ್ಮ ಗೇಣಿದಾರರಿಂದ ತೆಂಗಿನಕಾಯಿ, ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಸ್ಥಳೀಯರ ನೆರವಿನಿಂದ ಸಮಾರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಇವರ ಕುಟುಂಬದವರು, ಗ್ರಾಮಸ್ಥರು ಸೇರಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಚಾರ ಗ್ರಾಮಸ್ಥರು ಮತ್ತು ಪರಿಸರದ ಆರಾಧ್ಯ ದೈವವಾಗಿ ಜಾನುವಾರುಗಳಿಗೆ ಕೃಷಿಕರಿಗೆ ಅನಾರೋಗ್ಯ ಪೀಡಿತರಿಗೆ ದೈವದ ರಕ್ಷಣೆ ಇದೆ. ನಂಬಿದ ಭಕ್ತರು ಹರಕೆ ರೂಪದಲ್ಲಿ ವಿಶೇಷ ಮತ್ತು ಅಪರೂಪದ ಕಡುಬು ಸೇವೆ ನೀಡುತ್ತಾರೆ. ತುಲಾಭಾರ ಸೇವೆ, ಹಾಲಿಟ್ಟು ಸೇವೆ, ಅನ್ನದಾನ ಸೇವೆ ಇಲ್ಲಿನ ವಿಶೇಷತೆ. ನಂಬಿದವರಿಗೆ ಇಂಬು ಕೊಡುವ ಶ್ರೀ ಬೊಬ್ಬರ್ಯ ದೇವರ ಸನ್ನಿಧಿಗೆ 5 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಬೊಬ್ಬರ್ಯ ಸಾನ್ನಿಧ್ಯಕ್ಕೆ ಹಾಸನ ಅರೆಮಾದನಹಳ್ಳಿ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ, ಉಡುಪಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ, ಬಾಳಕುದ್ರು ಮಠದ ನರಸಿಂಹಶ್ರಮ ಸ್ವಾಮೀಜಿ ಬಂದು ಭಕ್ತರನ್ನು ಹರಸಿದ್ದಾರೆ.
ಪಾಳು ಬಿದ್ದ ಜೋಮ್ಲು ಬೊಬ್ಬರ್ಯ ಸಾನ್ನಿಧ್ಯವನ್ನು ಸ್ಥಳೀಯ ವಿವೇಕಾನಂದ ಯುವ ವೇದಿಕೆ ಚಾರ ಹಾಗೂ ಶ್ರೀಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಕ್ಷೇತ್ರ ಅಭಿವೃದ್ಧಿ ಸಮಿತಿ ರಚಿಸಿ ಜೀರ್ಣೋದ್ಧಾರ ಮಾಡಲಾಗಿದೆ. ಪ್ರತಿ ವರ್ಷ ನಡೆಯುವ ಎಳ್ಳಮಾವಾಸ್ಯೆಗೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಣ್ಯ ತೀರ್ಥಸ್ನಾನ ಮಾಡುತ್ತಾರೆ. ಹಿಂದೆ ನಿಂತು ಹೋಗಿದ್ದ ಅನ್ನಸಂತರ್ಪಣೆಯನ್ನು ಭಕ್ತರ ಸಹಕಾರದಿಂದ ಮತ್ತೆ ಆರಂಭಿಸಲಾಗಿದೆ.
ಬಾವಿಗದ್ದೆ ಮಿಥುನ್ ಶೆಟ್ಟಿ
ಜೋಮ್ಲು ತೀರ್ಥದಲ್ಲಿ ಹತ್ತಾರು ಅವಘಡಗಳಾಗಿದ್ದರೂ ಶ್ರೀ ಬೊಬ್ಬರ್ಯ ದೈವ ಕ್ಷೇತ್ರದ ಜೀರ್ಣೋದ್ಧಾರದ ಬಳಿಕ ಯಾವುದೇ ಅವಘಡ ಸಂಭವಿಸಿಲ್ಲ. ಇದು ಕ್ಷೇತ್ರದ ಮಹಿಮೆ, ಬೊಬ್ಬರ್ಯ ದೇವರ ಮಹಿಮೆ.
ಬಿ.ಎಂ.ರವಿಂದ್ರನಾಥ ಶೆಟ್ಟಿ ಹಂದಿಕಲ್ಲು
ಅಧ್ಯಕ್ಷರು, ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿ
ಜೋಮ್ಲು ಶ್ರೀ ಬೊಬ್ಬರ್ಯ ಕ್ಷೇತ್ರದ ಸಮೀಪವೇ ಪ್ರಖ್ಯಾತವಾದ ಜೋಮ್ಲು ಫಾಲ್ಸ್ ಪ್ರವಾಸಿ ತಾಣ ಇದೆ. ಫಾಲ್ಸ್ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಬರುವುದರಿಂದ ಪ್ರವಾಸಿಗರ ಅನುಕೂಲಕ್ಕಾಗಿ ಅರಣ್ಯ ಇಲಾಖೆಯ ಇಕೋ ಡೆವಲಪ್‌ಮೆಂಟ್ ಕಮಿಟಿ ಇಡಿಸಿ ಮೂಲಕ ವಿವಿಧ ಸೌಕರ್ಯಗಳನ್ನು ಒದಗಿಸಿ ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ.
ಅಶೋಕ್ ನಾಯ್ಕ, ಅಧ್ಯಕ್ಷರು,
ವಿವೇಕಾನಂದ ಯುವವೇದಿಕೆ