

ಹಾಸನ: ಇಲ್ಲಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಎಂಸಿಎಫ್ ನೇತೃತ್ವದಲ್ಲಿ ಮಂಗಳವಾರ ಮಣ್ಣು ಮಾದರಿ ಸಂಗ್ರಹಣಾ ಅಭಿಯಾನ ನಡೆಸಲಾಯಿತು. ವಿದ್ಯಾರ್ಥಿಗಳು ಮಣ್ಣು ಪರೀಕ್ಷೆಗಾಗಿ ಮಣ್ಣು ಮಾದರಿ ಸಂಗ್ರಹಣಾ ಮಾಡುವ ವಿಧಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಮಣ್ಣು ವಿಜ್ಞಾನ ಮತ್ತು ಮಣ್ಣು ರಸಾಯನಶಾಸ್ತ್ರ ವಿಭಾಗದ ಡಾ.ಎಲ್.ಬಿ.ಅಶೋಕ್ ಮಾತನಾಡಿ, ಮಣ್ಣು ಪರೀಕ್ಷೆ ಕೃಷಿಯಲ್ಲಿ ಅತ್ಯಂತ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಇದು ರೈತರಿಗೆ ತಮ್ಮ ಮಣ್ಣಿನ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ವಿವಿಧ ಹಂತಗಳನ್ನು ಒಳಗೊಂಡಿದೆ. ಮಣ್ಣು ರೈತರು ತಮ್ಮ ಕೃಷಿ ಭೂಮಿಯಿಂದ ಸರಿಯಾದ ಮಾದರಿಯಲ್ಲಿ ಮಣ್ಣು ಸಂಗ್ರಹಿಸಬೇಕು. ಜಮೀನಿನ ವಿವಿಧ ಭಾಗಗಳಿಂದ ಮತ್ತು ಆಳಗಳಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಬೇಕು. ಸಾಮಾನ್ಯವಾಗಿ, 15-20 ಭಾಗಗಳಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವುದು ಉತ್ತಮ. ಮಣ್ಣಿನ ಮಾದರಿಗಳನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ, ಮಣ್ಣಿನ ಪೋಷಕಾಂಶಗಳು (ಜೇನೆ, ಫಾಸ್ಫೋರಸ್, ಪೊಟಾಷಿಯಮ್), ಆಮ್ಲಿಯತೆ ಮತ್ತು ಇತರ ಲಕ್ಷಣಗಳನ್ನು ಪರಿಶೀಲಿಸಲಾಗುತ್ತದೆ ಎಂದರು.
ಪರೀಕ್ಷೆಯ ನಂತರ ರೈತರಿಗೆ ವರದಿ ನೀಡಲಾಗುತ್ತದೆ. ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆಯಿದೆ? ಯಾವ ಪೋಷಕಾಂಶಗಳನ್ನು ನೀಡುವ ಅಗತ್ಯವಿದೆ? ಮಣ್ಣಿನ ಆಮ್ಲಿಯತೆ ಅಥವಾ ಆಲ್ಕಲಿನತೆಯನ್ನು ಹೇಗೆ ಸುಧಾರಿಸಬಹುದು? ಎಂಬ ಮಾಹಿತಿಯನ್ನು ರೈತರಿಗೆ ವರದಿಯಲ್ಲಿ ತಿಳಿಸಲಾಗುತ್ತದೆ. ಉದಾಹರಣೆಗೆ, ಅಗತ್ಯವಿರುವ ನೈಟ್ರೋಜನ್, ಫಾಸ್ಫೋರಸ್ ಮತ್ತು ಪೊಟಾಷಿಯಮ್ ಪ್ರಮಾಣವನ್ನು ತಿಳಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಂಸಿಎಫ್‌ನ ವಿಕ್ರಮ್, ಉತ್ತಮ್, ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.