

ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮತ್ತು ಡಾ. ರಾಜ್‌ಕುಮಾರ್ ರಸ್ತೆ ವಿಸ್ತರಿಸಿ ಜೋಡಿ ರಸ್ತೆ ನಿರ್ಮಾಣ ಮಾಡುವ ಸಂಬಂಧ ಗುರುವಾರ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಟೋಟಲ್ ಸ್ಟೇಷನ್ ಸರ್ವೇ ಕಾರ್ಯ ನಡೆಸಿದರು.
2024ರ ಅಕ್ಟೋಬರ್ ತಿಂಗಳಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆ, ಶಾಸಕ ಎ.ಆರ್.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಕೊಳ್ಳೇಗಾಲ ನಗರಸಭೆಯ ಪ್ರಮುಖ ರಸ್ತೆಗಳಾದ ಡಾ.ಅಂಬೇಡ್ಕರ್ ಹಾಗೂ ಡಾ.ರಾಜ್ ಕುಮಾರ್ ರಸ್ತೆ ವಿಸ್ತರಣೆ ವಿಚಾರ ಚರ್ಚೆಗೆ ಒಳಗಾಗಿತ್ತು. ಕೊನೆಗೆ ಸದಸ್ಯರ ಒಮ್ಮತದಿಂದ ಎರಡು ರಸ್ತೆಗಳ ವಿಸ್ತರಣೆ ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನಗರಸಭೆ ನಗರಸಭೆ ಪೌರಾಯುಕ್ತ ರಮೇಶ್, ಎಇಇ ಸುರೇಶ್, ಇಂಜಿನಿಯರ್ ನಾಗೇಂದ್ರ, ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್, ಇಂಜಿನಿಯರ್ ಸರ್ವೇ ನಡೆಸಿದರು. ಟೋಟಲ್ ಸ್ಟೇಷನ್ ಸರ್ವೆಯಲ್ಲಿ 80 ಅಡಿ ರಸ್ತೆ ವ್ಯಾಪ್ತಿಗೆ ಬರುವ ಮಳಿಗೆಗಳು, ಮನೆಗಳು ಮತ್ತು ಆಸ್ತಿಯನ್ನು ಗುರುತಿಸಲಾಯಿತು.
ಈ ಬಗ್ಗೆ ನಗರಸಭೆ ಪೌರಾಯುಕ್ತ ಎ.ರಮೇಶ್ ಮಾತನಾಡಿ, ಹಿಂದೆ ನಡೆದ ಕೌನ್ಸಿಲ್ ಸಭೆಯಲ್ಲಿ ಪಟ್ಟಣದ ಡಾ.ರಾಜ್ ಕುಮಾರ ರಸ್ತೆ ಒಳಗೊಂಡಂತೆ ಎಂಜಿಎಸ್‌ವಿ ವೃತ್ತದಿಂದ ಕನ್ನಿಕಾ ಪರಮೇಶ್ವರಿ ವೃತ್ತದವರೆಗೆ ಹಾಗೂ ಅಂಬೇಡ್ಕರ್ ರಸ್ತೆ ವಿಸ್ತರಿಸಬೇಕೆಂಬ ತೀರ್ಮಾನ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ ವಿಸ್ತರಿಸಿ ಅಭಿವೃದ್ಧಿಪಡಿಸಲಿದೆ. ನಂತರ, ನಗರಸಭೆಗೆ ಹಸ್ತಾಂತರ ಮಾಡಲಿದೆ. ಈ ಹಿನ್ನೆಲೆಯಲ್ಲಿ ಜಂಟಿಯಾಗಿ ಲೈನ್ ಸರ್ವೇ ನಡೆಸಿದ್ದೇವೆ. ಎರಡು ದಿನದಲ್ಲಿ ಶಾಸಕರಿಗೆ ಈ ವರದಿ ಸಲ್ಲಿಸುತ್ತೇವೆ ಎಂದರು.
ಈಗಾಗಲೇ ರಸ್ತೆ ವಿಸ್ತರಣೆಗೆ 90 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಸರ್ಕಾರ ಈ ಪ್ರಸ್ತಾವನೆಯನ್ನು ಶಿಫಾರಸು ಮಾಡಿದೆ. ಅಲ್ಲದೆ ಸರ್ಕಾರದ ಅಧೀನ ಕಾರ್ಯದರ್ಶಿ ಜತೆ ರಸ್ತೆ ವಿಸ್ತರಣೆ ಬಗ್ಗೆ ಚರ್ಚಿಸುವುದಾಗಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.