

ಮಲ್ಲಪ್ಪ ಗೌಡ ಔರಾದ್
ನೀರಿನ ಬಳಕೆ, ಸಂರಕ್ಷಣೆಯಲ್ಲಿ ಯಶಸ್ವಿಯಾಗಿರುವ ಜೋಜನಾ ಗ್ರಾಮ ಪಂಚಾಯಿತಿಯು ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಷ್ಟ್ರೀಯ ಜಲ ಪ್ರಶಸ್ತಿಗೆ ಭಾಜನವಾಗಿದೆ. ಇದು ದಕ್ಷಿಣ ಭಾರತದ 3ನೇ ಮತ್ತು ರಾಜ್ಯದ ಏಕೈಕ ಅತ್ಯುತ್ತಮ ಗ್ರಾಪಂ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕೇಂದ್ರದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಸಚಿವಾಲಯವು ನೀರಿನ ಸಂರಕ್ಷಣೆ ಉತ್ತಮ ರೀತಿಯಲ್ಲಿ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಉತ್ತೇಜಿಸಲು ರಾಷ್ಟ್ರೀಯ ಜಲ ಪ್ರಶಸ್ತಿ ನೀಡುತ್ತಿದೆ. 2019ರ ಪ್ರಶಸ್ತಿಗೆ ಜೋಜನಾ ಗ್ರಾಪಂ ಆಯ್ಕೆ ಆಗಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ಮೂಡಿಸಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಗುರುವಾರ ಕರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಪಂ ಪರವಾಗಿ ಮಾಜಿ ಅಧ್ಯಕ್ಷ ಘಾಳರೆಡ್ಡಿ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜಲ ವಿದ್ಯುತ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರತನ್ಲಾಲ್ ಖಟ್ಟರ್ ಇತರರಿದ್ದರು. ಕರೊನಾ ನಿಯಂತ್ರಣವಾದ ನಂತರ ಮತ್ತೆ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಹಾಗೂ ನಗದು ವಿತರಣೆ ನಡೆಯಲಿದೆ.
ಗ್ರಾಪಂಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದಕ್ಕೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್, ರಿಲಾಯನ್ಸ್ ಫೌಂಡೇಷನ್ ಯೋಜನಾಧಿಕಾರಿ ಶಿವಾನಂದ ಮಠಪತಿ, ಗ್ರಾಪಂ ಮಾಜಿ ಅಧ್ಯಕ್ಷ ಘಾಳರೆಡ್ಡಿ ಮುಂಗೆ, ಪಿಡಿಒ ಸಂತೋಷ ಪಾಟೀಲ್ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.
ನೀರಿನ ಸಮರ್ಪಕ ಬಳಕೆ ಹೇಗೆ?
ನೀರಿನ ಸುರಕ್ಷತೆ ಮತ್ತು ಸಮರ್ಪಕ ಬಳಕೆ ಸಾಧಿಸಲು ರಿಲಾಯನ್ಸ್ ಫೌಂಡೇಷನ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಮಾರ್ಗದರ್ಶನದಲ್ಲಿ ಗ್ರಾಪಂ ಹಲವು ಕಾರ್ಯಕ್ರಮ ರೂಪಿಸಿ ಜಾರಿಗೆ ತಂದಿದೆ. ಗ್ರಾಪಂ ವ್ಯಾಪ್ತಿಯ ಜೋಜನಾ, ನಂದಿನಾಗೂರ, ಲಿಂಗದಳ್ಳಿ, ನಾಗೂರ(ಎಂ), ಬೋರ್ಗಿ ಗ್ರಾಮಗಳಲ್ಲಿ 2014ರಿಂದ ಸ್ಥಳೀಯ ರೈತ ಸಂಘಗಳ ಮೂಲಕ ನೀರಿನ ಬಜೆಟ್ ರೂಪಿಸಲಾಗಿದೆ. ಹೊಲಗಳಲ್ಲಿ 343 ಕೃಷಿ ಕೊಳ, 258 ಎಕರೆ ಜಮೀನಿನಲ್ಲಿ ಅಣೆಕಟ್ಟು ನಿರ್ಮಿಸಿ ಮಳೆ ನೀರು ಪೋಲಾಗದಂತೆ ಸೂಕ್ಷ್ಮ ನೀರಾವರಿ ವಿಧಾನ ಯಶಸ್ವಿಯಾಗಿ ಅಳವಡಿಸಲಾಗಿದೆ. ಗ್ರಾಪಂ ವ್ಯಾಪ್ತಿಯ 1246 ಎಕರೆ ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ತೋಟಗಾರಿಕೆ ಗದ್ದೆಗಳಾಗಿ ಪರಿವರ್ತಿಸಲಾಗಿದೆ. ರೈತರು ಕೃಷಿಯಲ್ಲಿ ಆಧುನಿಕ ವಿಧಾನ ಅಳವಡಿಸಿಕೊಳ್ಳಲು ರಿಲಾಯನ್ಸ್ ಸಲಹೆ ನೀಡಿ, ಹೊಲಗಳ ನಾಲಾ ಕೆಲಸ ಅಭಿವೃದ್ಧಿ ಮಾಡಿದೆ. ಹೀಗಾಗಿ ಗ್ರಾಪಂ ವ್ಯಾಪ್ತಿಯ ಮಳೆಯಾಶ್ರಿತ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ. ಈ ಎಲ್ಲ ಜಲ ಕ್ರಾಂತಿ ಫಲವಾಗಿ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಪ್ರಶಸ್ತಿಗಾಗಿ ಗ್ರಾಪಂ ಮತ್ತು ರಿಲಾಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಅರ್ಜಿ ಸಲ್ಲಿಸಿದ ನಂತರ ಕೇಂದ್ರದ ಅಂತರ್ಜಲ ಮಂಡಳಿ ಮತ್ತು ಜಲಸಂಪನ್ಮೂಲ ಇಲಾಖೆ ವಿಜ್ಞಾನಿ ಡಾ.ಎಸ್.ಎಸ್. ವಿಠ್ಠಲ್ ನೇತೃತ್ವದ ನಿಯೋಗ ಜೋಜನಾ ಗ್ರಾಪಂಗೆ ಭೇಟಿ ನೀಡಿ ಎಲ್ಲ ಮಾಹಿತಿ ಕಲೆ ಹಾಕಿತ್ತು.
ಜೋಜನಾ ಗ್ರಾಪಂ ಸರ್ಕಾರದ ಸೌಲಭ್ಯ ಮತ್ತು ರಿಲಾಯನ್ಸ್ ಫೌಂಡೇಷನ್ ಸಹಾಯ ಮತ್ತು ಮಾರ್ಗದರ್ಶನ ಪಡೆದು ಸಮರ್ಪಕ ನೀರಿನ ಬಳಕೆ ಬಗ್ಗೆ ಸಾಕಷ್ಟು ಉತ್ತಮ ಕಾರ್ಯ ಮಾಡಿದ ಕಾರಣ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಜೋಜನಾ ಎಲ್ಲ ಗ್ರಾಪಂಗಳಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಪಂಗಳು ಇದೇ ಮಾದರಿ ಅಳವಡಿಸಿಕೊಳ್ಳಬೇಕು.| ಗ್ಯಾನೇಂದ್ರಕುಮಾರ ಗಂಗವಾರ್ಜಿಪಂ ಸಿಇಒ
ಜೋಜನಾ ಗ್ರಾಪಂ ವ್ಯಾಪ್ತಿಯ ಐದು ಹಳ್ಳಿಗಳಲ್ಲಿ ರಿಲಾಯನ್ಸ್ ಯೋಜನೆಯಿಂದ ನೀರಿನ ಸಮಗ್ರ ಬಳಕೆ ಮತ್ತು ನಿರ್ವಹಣೆ ಬಗ್ಗೆ ಸಾಕಷ್ಟು ಕಾರ್ಯ ಮಾಡಲಾಗಿದೆ. ಅವುಗಳನ್ನು ರೈತರು ಸಮರ್ಪಕವಾಗಿ ಬಳಸಿದ ಫಲವಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆಯಲು ಜೋಜನಾ ಸಫಲವಾಗಿದೆ.| ಶಿವಾನಂದ ಮಠಪತಿರಿಲಾಯನ್ಸ್ ಫೌಂಡೇಷನ್ ಯೋಜನಾಧಿಕಾರಿ