ಜೋಗ್ ಫಾಲ್ಸ್‌ನಲ್ಲಿ ಮೊಳಗಿದ ಕೋಟಿ ಕಂಠ

KGL WEBBB
Published on

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತ ಮುಂಭಾಗ ನಾಡಗೀತೆ ಸೇರಿದಂತೆ ಕನ್ನಡ ನಾಡು-ನುಡಿ ಕುರಿತಾದ ಗೀತೆಗಳು ಮೊಳಗಿದವು. ಗಾಯಕಿ ವಸುಧಾ ಶರ್ಮ ಅವರ ಸಾರಥ್ಯದಲ್ಲಿ ಕನ್ನಡದ ಸಮೂಹ ಗಾಯನ ಮೊಳಗಿತು. ಸಾಗರದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು, ಜೋಗದ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಕಾರ್ಗಲ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕೋಟಿ ಕಂಠಕ್ಕೆ ದನಿಯಾದರು. ಸ್ಥಳೀಯರು, ಪ್ರವಾಸಿಗರು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಗಾಯನದ ನಂತರ ಕನ್ನಡವನ್ನು ಉಳಿಸಿ ಬೆಳೆಸುತ್ತೇನೆ ಎನ್ನುವ ಸಂಕಲ್ಪದ ಪ್ರತಿಜ್ಞಾವಿಧಿಯನ್ನು ಸಾಗರದ ಉಪ ವಿಭಾಗಾಧಿಕಾರಿ ಪಲ್ಲವಿ ಬೋಧಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಜೋಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಲಪಾತದ ವೀಕ್ಷಣಾ ಸ್ಥಳಗಳನ್ನು ತೆರವುಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಒಂದೆಡೆ ನಿಲ್ಲಿಸಲು ಕಷ್ಟವಾದ ಕಾರಣ, ಕಾರ್ಯಕ್ರಮವನ್ನು ಕೆಪಿಸಿಯ ಮೈಸೂರು ಬಂಗಲೆಯ ಮುಂಭಾಗದ ಆವರಣದಲ್ಲಿ ಆಯೋಜಿಸಲಾಗಿತ್ತು. ಕೆಲವು ವಿದ್ಯಾರ್ಥಿಗಳನ್ನು ಆವರಣದ ಹೊರಭಾಗದಲ್ಲಿನ ಜಲಪಾತದ ವೀಕ್ಷಣಾ ಸ್ಥಳದಲ್ಲಿ ನಿಲ್ಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net