

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಉತ್ತಮ ಪರಿಸರ ಕಾಪಾಡಿಕೊಳ್ಳುವ ಮೂಲಕ ಜೀವವೈವಿಧ್ಯವನ್ನೂ ಉಳಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್.ರಾಮಕೃಷ್ಣ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜೋಗ ಜಲಪಾತದಲ್ಲಿ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಫಿಟ್ ಇಂಡಿಯಾ ಫ್ರೀಡಂ ರನ್ ಮತ್ತು ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಮನುಷ್ಯ ಸುಂದರ ಪರಿಸರವನ್ನು ಅರಸಿ ಬರುತ್ತಾನೆ. ಜತೆಗೆ ಪ್ರಾಣಿ, ಪಕ್ಷಿಗಳು ಇಲ್ಲಿ ನೆಲೆಸಬೇಕು. ನದಿಮೂಲವನ್ನು ರಕ್ಷಿಸಿಕೊಳ್ಳಬೇಕು. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು ಎಂದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ದೇಶಾದ್ಯಂತ ಅ.2ರಿಂದ 31ರವರೆಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜೋಗ ಜಲಪಾತಕ್ಕೆ ನಿತ್ಯವೂ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಅನುಪಯುಕ್ತ ವಸ್ತುಗಳನ್ನು ಎಸೆಯಲಾಗುತ್ತಿದೆ. ಇನ್ನಷ್ಟು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರವು ಸೂಚನಾ ಫಲಕಗಳನ್ನು ಅಳವಡಿಸಿ ಪರಿಸರವನ್ನು ಕಾಪಾಡಬೇಕು ಎಂದು ಹೇಳಿದರು.
ಸ್ವಚ್ಛತಾ ಶ್ರಮದಾನದಲ್ಲಿ ತಾಲೂಕಿನ ಎಲ್‌ಬಿ ಕಾಲೇಜು, ಇಂದಿರಾ ಗಾಂಧಿ ಕಾಲೇಜು ಹಾಗೂ ಕಾಕಲ್ ಕಾಲೇಜಿನ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.