

ಚಿತ್ರದುರ್ಗ: ಜೋಗಿಮಟ್ಟಿ ಅರಣ್ಯ ಪ್ರದೇಶದ ಬಫರ್ ಜೋನ್‌ನಲ್ಲಿ ಗುರುವಾರ ಸಂಜೆ 4ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿ ನಂದಿಸುವ ಮೂಲಕ ವ್ಯಾಪ್ತಿಯೊಳಗೆ ಪ್ರವೇಶಿಸದಂತೆ ತಡೆಯುವಲ್ಲಿ ಸಫಲರಾಗಿದ್ದಾರೆ.
ಬೇಸಿಗೆ ಕಾಲ ಆರಂಭವಾಗಿದ್ದು, ಈ ವೇಳೆ ಸಾಮಾನ್ಯವಾಗಿ ಒಣಗಿದ ಹುಲ್ಲು, ಗಿಡಗಳಿಗೆ ಯಾರಾದರೂ ಬೆಂಕಿ ಹಚ್ಚಿದಲ್ಲಿ ಸುತ್ತಮುತ್ತಲಿನ ವ್ಯಾಪ್ತಿಗೂ ಹರಡುವುದು ಸಾಮಾನ್ಯ. ಅದೇ ರೀತಿ ಜೋಗಿಮಟ್ಟಿ ಅರಣ್ಯ ಪ್ರದೇಶದ ಹೊರಭಾಗದಲ್ಲೂ ಆಗಿದೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಕೂಡಲೇ ಅಗ್ನಿಶಾಮಕ ಠಾಣೆಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಅರಣ್ಯ ವ್ಯಾಪ್ತಿಗೆ ಹರಡಿಲ್ಲವೆಂದು ತಿಳಿದುಬಂದಿದೆ.
ಜೋಗಿಮಟ್ಟಿ ಸಮೀಪ ಯಾರೋ ಬೆಂಕಿ ಹಚ್ಚಿ ಹೋಗಿದ್ದರಿಂದ ಬಫರ್ ಜೋನ್‌ನಲ್ಲಿ ಕಾಣಿಸಿಕೊಂಡ ಕೂಡಲೇ ನಂದಿಸಲು ಮುಂದಾಗಿದ್ದೇವೆ. ಅರಣ್ಯ ವಾಪ್ತಿಯೊಳಗೆ ಯಾವುದೇ ಹಾನಿ ಉಂಟಾಗಿಲ್ಲವೆಂದು ಆರ್‌ಎಫ್‌ಒ ಉಷಾರಾಣಿ ಮಾಹಿತಿ ನೀಡಿದ್ದಾರೆ.
ಕೆಲವರು ತಮ್ಮ ಜಮೀನಿನಲ್ಲಿ ಬಾಧೆ ಹುಲ್ಲುಗಳಿಗೆ ಬೇಸಿಗೆ ಅವಧಿಯಲ್ಲಿ ಬೆಂಕಿ ಹಚ್ಚುವುದು ಸಾಮಾನ್ಯ. ಈ ವೇಳೆ ಸುಟ್ಟ ಹುಲ್ಲು ಮುಂದಿನ 15 ದಿನದೊಳಗೆ ಮರಳಿ ಚಿಗುರಿ ಜಾನುವಾರುಗಳಿಗೆ ಮೇವು ಸಿಗಲಿದೆ ಎಂಬ ಕಾರಣದಿಂದ ಹಚ್ಚುವುದನ್ನು ರೂಢಿಮಾಡಿಕೊಂಡಿದ್ದಾರೆ. ಒಂದು ವೇಳೆ ಅರಣ್ಯ ಪ್ರದೇಶ ಪ್ರವೇಶಿಸಿದರೆ, ಪ್ರಾಣಿ-ಪಕ್ಷಿ, ಗಿಡ-ಮರಗಳಿಗೆ ಹಾನಿಯಾಗಲಿದೆ ಎಂಬ ಅರಿವು ಇರುವುದಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಲದಲ್ಲಿ ತಪ್ಪಿದ ನಷ್ಟ: ಐನಳ್ಳಿ ಕುರುಬರಹಟ್ಟಿ ಗ್ರಾಮದ ಜಮೀನೊಂದರ ಬದುವಿನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ರೈತರು ನೋಡಿ ಬೆಂಕಿ ನಂದಿಸಿದ್ದು, ಎರಡು ಎಕರೆಯಲ್ಲಿನ ಮೆಕ್ಕೆಜೋಳ ಬೆಳೆಗೆ ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕ ಅಧಿಕಾರಿಗಳು, ಸಿಬ್ಬಂದಿ ಹೋಗುವ ಮುನ್ನವೇ ನಂದಿಸಿದ್ದಾರೆ ಎಂಬ ಮಾಹಿತಿ ಇದೆ.