ಜೋಗ ಬಳಿ ಕೆಎಸ್‌ಆರ್‌ಟಿಸಿ ಬಸ್, ಓಮ್ನಿ ಡಿಕ್ಕಿ: ವಡನಬೈಲ್ ಧರ್ಮದರ್ಶಿಗೆ ಗಾಯ, ಸೋದರ ಸಾವು

KGL WEEEEEEBBBB
Published on

ಕಾರ್ಗಲ್: ಜೋಗದ ಶಿರೂರು ಕೆರೆ ಬಳಿಯ ತಿರುವಿನಲ್ಲಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಓಮ್ನಿ ವ್ಯಾನ್ ಡಿಕ್ಕಿಯಾಗಿ ಓಮ್ನಿಯಲ್ಲಿದ್ದ ವಡನ್‌ಬೈಲು ಶ್ರೀ ಪದ್ಮಾವತಿ ದೇವಾಲಯದ ಧರ್ಮದರ್ಶಿ ವೀರರಾಜಯ್ಯ ಜೈನ್ ಗಂಭೀರ ಗಾಯಗೊಂಡಿದ್ದು ಅವರ ಕಿರಿಯ ಸಹೋದರ ದೇವಯ್ಯ ಜೈನ್ (67) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರ್ಗಲ್‌ನ ಚೌಡೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಳಗಲ್ಲೂರು ವ್ಯವಸಾಯ ಸೇವಾ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ವೀರರಾಜಯ್ಯ ಜೈನ್ ಹಾಗೂ ಅವರ ಸಹೋದರ ದೇವಯ್ಯ ಜೈನ್ ಓಮ್ನಿ ವ್ಯಾನ್‌ನಲ್ಲಿ ಆಗಮಿಸುತ್ತಿದ್ದರು. ಚಿಕ್ಕಮಗಳೂರಿನಿಂದ ಕಾರವಾರದ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಜೋಗದ ಶಿರೂರು ಕೆರೆ ಬಳಿ ಮುಖಾಮುಖಿ ಡಿಕ್ಕಿಯಾಗಿದ್ದು ತೀವ್ರ ಗಾಯಗೊಂಡ ವೀರರಾಜಯ್ಯ ಜೈನ್ ಅವರಿಗೆ ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಓಮ್ನಿ ಚಲಾಯಿಸುತ್ತಿದ್ದ ದೇವಯ್ಯ ಜೈನ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ ವಡನ್‌ಬೈಲ್‌ನಲ್ಲಿ ನಡೆಯಲಿದೆ.

ಕಾರ್ಗಲ್ ಕಡೆ ಆಗಮಿಸುತ್ತಿದ್ದ ಓಮ್ನಿ ವ್ಯಾನ್ ಬಸ್ ಗುದ್ದಿದ ರಭಸಕ್ಕೆ ಮತ್ತೆ ವಾಪಸು ಜೋಗದ ಕಡೆಗೆ ತಿರುಗಿ ನಿಂತಿದ್ದು ಸಂಪೂರ್ಣ ನಜ್ಜುಗುಜ್ಜ್ಜಾಗಿದೆ. ಜೋಗ ಪಿಎಸ್‌ಐ ನಿರ್ಮಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net