

ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳನ್ನು ಹಿಡಿದು ಕೊಲ್ಲಿಸುವುದು ಅಥವಾ ಬೇರೆಡೆಗೆ ಸಾಗಿಸಲಿಕ್ಕೆ ಕಾನೂನಿನ ತೊಡಕಿದೆ. ಆದ್ದರಿಂದ ಇದಕ್ಕೆ ಪರಿಹಾರವಾಗಿ ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜತೆಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ತಿಳಿಸಿದರು.
ಸೋಮವಾರ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಪಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಶ್ವಾನಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಪಪಂಗೆ ಸವಾಲಿನ ಕೆಲಸವಾಗಲಿದೆ. ಇದಕ್ಕೆ ವೈದ್ಯರು ಹಾಗೂ ಸಿಬ್ಬಂದಿ ತಂಡ ಜತೆಗೆ ನಾಯಿಗಳನ್ನು ಹಿಡಿಯುವವರು ಬೇಕು. ಕಾರ್ಯಾಚರಣೆಗೆ ಒಂದು ವಾರ ಬೇಕು. ಡಿಸಿ ಜತೆಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಕಳೆದ ಕೆಲ ದಿನಗಳಿಂದ ಜೋಗ-ಕಾರ್ಗಲ್ ಪಪಂ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ನಾಯಿ ಮತ್ತು ಇತರ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ. ಚಿರತೆಯನ್ನು ಸೆರೆ ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬೋನು ಇಡಲಾಗುತ್ತಿದೆ.
ಪಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಮುಖ್ಯಪೇಟೆ ಹೊರತುಪಡಿಸಿ ಆಯಾ ವಾರ್ಡ್‌ಗಳಲ್ಲಿ ತಿಂಗಳಲ್ಲಿ ಒಮ್ಮೆಯೂ ಪೌರ ಕಾರ್ಮಿಕರು ಬಂದು ಕೆಲಸ ಮಾಡುವುದಿಲ್ಲ. ಇದಕ್ಕೆ ಆರೋಗ್ಯ ನಿರೀಕ್ಷಕರೇ ಕಾರಣ ಎಂದು ಹಲವು ಸದಸ್ಯರು ಆರೋಪಿಸಿದರು. ಜತೆಗೆ ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡರವರೆಗೆ ನೌಕರರ ಸೇವಾ ಅವಧಿಯನ್ನು ಹಾಲಿ ನಿಗದಿ ಮಾಡಿದ್ದು ಮಧ್ಯಾಹ್ನದ ನಂತರ ಉಂಟಾಗುವ ತೊಂದರೆಗಳಿಗೆ ಪೌರನೌಕರರು ಸಿಗುವುದಿಲ್ಲ. ಆದ್ದರಿಂದ ಮುಖ್ಯಾಧಿಕಾರಿಗಳು ಇದಕ್ಕೆ ಗಮನಹರಿಸಿ ಹಳೇ ಸಮಯದ ನಿಗದಿ ಬದಲಿಗೆ ಬೆಳಗ್ಗೆ 6ರಿಂದ 10ರವರೆಗೆ ನಂತರ ಮಧ್ಯಾಹ್ನ 2ರಿಂದ 5.30ರವರೆಗೆ ಸಮಯ ನಿಗದಿ ಪಡಿಸಲು ಚಿಂತನೆ ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಸಮುದಾಯ ಭವನ ಬಾಡಿಗೆ ಚರ್ಚೆ: ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಪಪಂ ವ್ಯಾಪ್ತಿಯಲ್ಲಿ ನಿರ್ಮಾಣವಾದ ಸಮುದಾಯ ಭವನಗಳ ಬಾಡಿಗೆ ನಿಗದಿಪಡಿಸುವ ವಿಚಾರ ಚರ್ಚಿಸಲಾಯಿತು. ದೇವಸ್ಥಾನ ಮತ್ತು ಚರ್ಚ್‌ಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ ಸಮುದಾಯ ಭವನ ನಿರ್ಮಾಣ ಮಾಡಿ ನಿರ್ವಹಣೆಯನ್ನು ಅವರಿಗೆ ಒಪ್ಪಿಸಲಾಗಿದೆ. ಇಲ್ಲಿ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಇದಕ್ಕೆ ಪಪಂನಿಂದ ಅನುಮತಿ ಪಡೆದು ಬಾಡಿಗೆಯಲ್ಲಿ ಒಂದಷ್ಟು ಹಣ ನೀಡುವಂತೆ ಚರ್ಚಿಸಲು ಸಮುದಾಯ ಭವನಗಳ ಸಂಬಂಧಪಟ್ಟವರನ್ನು ಕರೆಸಿ ಮಾತುಕತೆ ಮಾಡಲು ತೀರ್ಮಾನಿಸಲಾಯಿತು.