ಜೋಕೆ … ಚರಂಡಿಗೆ ಬಿದ್ದೀರಾ!

ಜೋಕೆ … ಚರಂಡಿಗೆ ಬಿದ್ದೀರಾ!
Published on


ಬೇಲೂರು : ಪಟ್ಟಣದ ಅಂಬೇಡ್ಕರ್ ವೃತ್ತದ ರಸ್ತೆ ಪಕ್ಕದಲ್ಲಿ ನಿಂತಿದ್ದ ಮಳೆ ನೀರು ತೆರವಿಗಾಗಿ ಪುರಸಭೆ ಸಿಬ್ಬಂದಿ ತೆಗೆದಿದ್ದ ಚರಂಡಿ ಮೇಲ್ಬಾಗ ಮುಚ್ಚದ ಕಾರಣ, ಬೈಕ್ ಮತ್ತು ಕಾರುಗಳು ಗುಂಡಿಗಿಳಿದು ಜಖಂಗೊಂಡಿರುವ ಘಟನೆ ನಡೆದಿದ್ದು, ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಚರಂಡಿಯ ಮೇಲ್ಬಾ ಮುಚ್ಚಿಸಿ ಅನುಕೂಲ ಕಲ್ಪಿಸಬೇಕೆಂಬುದು ನಾಗರೀಕರ ಒತ್ತಾಯವಾಗಿದೆ.

ಕಳೆದ ಎರಡು-ಮೂರು ತಿಂಗಳಿಂದ ನಿರಂತವಾಗಿ ಸುರಿಯುತಿದ್ದ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಚನ್ನಕೇಶವಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆ ಪ್ರಾರಂಭದಲ್ಲೆ ದೊಡ್ಡಗುಂಡಿ ಬಿದ್ದು, ವಾಹನಗಳ ಸವಾರರು ಮತ್ತು ನಾಗರೀಕರು ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಮಳೆ ಬಂದ ಸಂದರ್ಭದಲ್ಲಂತೂ ಈ ಗುಂಡಿ ನೀರಿನಿಂದ ತುಂಬಿದ್ದಲ್ಲದೆ, ನೀರು ಹೊರ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ದ್ವಿಚಕ್ರ ವಾಹನಗಳ ಸವಾರರು ಗುಂಡಿಯೊಳಗೆ ಬಿದ್ದು ಗಾಯ ಗೊಂಡಿರುವ ಘಟನೆಗಳು ನಡೆದಿದ್ದವು.ಇದರಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಗುಂಡಿಯಲ್ಲಿ ನಿಂತಿರುವ ನೀರನ್ನು ಹೊರ ಹಾಕುವುದಕ್ಕಾಗಿ ತಿಂಗಳ ಹಿಂದೆಯೇ ರಸ್ತೆ ಪಕ್ಕದ ಚರಂಡಿಯನ್ನು ತೆಗೆದು ಚರಂಡಿ ಮೂಲಕ ನೀರು ಹೊರಕ್ಕೆ ಬಿಟ್ಟಿದ್ದರು. ಆದರೆ ನೀರುನ್ನು ಬಿಟ್ಟ ನಂತರ ಚರಂಡಿಯ ಮೇಲ್ಬಾಗವನ್ನು ಮುಚ್ಚುವುದನ್ನು ಸಿಬ್ಬಂದಿ ಮರೆತರು. ಈ ಗುಂಡಿ ಮುಚ್ಚದ ಕಾರಣ ಮುಖ್ಯರಸ್ತೆಯಲ್ಲಿ ಓಡಾಡುವ ವಾಹನಗಳು ಮತ್ತೊಂದು ವಾಹನಕ್ಕೆ ಜಾಗ ಬಿಡಲು ಪಕ್ಕಕ್ಕೆ ಹೋದಾಗ ಚರಂಡಿ ಗುಂಡಿಗೆ ಇಳಿದು ವಾಹನಗಳ ಜಖಂಗೆ ಕಾರಣವಾಗುತ್ತಿದೆ. ಅಲ್ಲದೆ ಸಾಮಾಗ್ರಿಗಳನ್ನು ಕೊಳ್ಳಲು ಅಂಗಡಿ ಮುಂಗಟ್ಟುಗಳಿಗೆ ಬರುವ ಸಾರ್ವಜನಿಕರು ಸಹ ಚರಂಡಿಗೆ ಬಿದ್ದು ಗಾಯ ಗೊಂಡಿದ್ದಾರೆ.

ಕತ್ತಲು ಸಮಯದಲ್ಲಂತೂ ಹೇಳುವ ಹಾಗಿಲ್ಲ. ಒಂದೇ ದಿನ ಮೂರ‌್ನಾಲ್ಕು ವಾಹನಗಳು ಗುಂಡಿಗಿಳಿದಿವೆ. ಇಷ್ಟೆಲ್ಲ ಘಟನೆಗಳು ನಡೆದರೂ ಸಹ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಂಬಂಧಿಸಿದ ಮುಖ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಅಂಬೇಡ್ಕರ್ ವೃತ್ತದಲ್ಲಿ ಬೃಹದಾಕಾರದಲ್ಲಿರುವ ಚರಂಡಿಯ ಗುಂಡಿಯನ್ನು ಮುಚ್ಚಿಸಿ ಸಾರ್ವಜನಿಕರಿಗೆ, ವಾಹನಗಳ ಸವಾರರಿಗೆ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂಬುದು ನಾಗರೀಕರ ಆಗ್ರಹವಾಗಿದೆ.

ಸುಜಯ್ ಕುಮಾರ್, ಮುಖ್ಯಾಧಿಕಾರಿ ಪುರಸಭೆ ಬೇಲೂರು.‘‘ ಈಗಾಗಲೇ ಮಳೆ ನೀರು ಹೊರ ಹಾಕುವುದಕ್ಕಾಗಿ ರಸ್ತೆ ಪಕ್ಕದ ಚರಂಡಿ ತೆಗೆದು ನೀರು ಹೊರ ಹಾಕಲಾಗಿತ್ತು. ರಸ್ತೆ ಗುಂಡಿ ಮುಚ್ಚಿದಿರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಈಗ ಸಧ್ಯಕ್ಕೆ ತಾತ್ಕಾಲಿವಾಗಿ ಚರಂಡಿ ಮೇಲ್ಬಾಗ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ನಂತರ ಶಾಶ್ವತ ಕಾಮಗಾರಿ ಮಾಡಿಸಿ ಅನುಕೂಲ ಕಲ್ಪಿಸಲಾಗುವುದು‘‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net