

ಜಿ.ಬಿ. ಹೆಸರೂರ ಶಿರಹಟ್ಟಿ
‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾದೊ, ಗೌಡರ ಸೆಡ್ಡಿಯ ಮ್ಯಾಲೆ ಸಿರಿ ಬಂದು ಜೋಕುಮಾರ..’ ಎಂಬ ಜಾನಪದ ಹಾಡೊಂದು ಕೇಳುತ್ತದೆ ಅಂದರೆ ಓಣಿಯಲ್ಲಿ ಜೋಕುಮಾರ ಬಂದಿದ್ದಾನೆ ಎಂದು ಅರ್ಥ.
ಭೂಲೋಕದಲ್ಲಿಯ ಸುಖ, ದುಃಖ ತಿಳಿಯುವುದಕ್ಕಾಗಿ ಶಿವನು ಗಣಪತಿಯನ್ನು ಕಳುಹಿಸುತ್ತಾನೆ. ಆದರೆ, ಮೃಷ್ಟಾನ್ನ ಭೋಜನ ಸವಿದು ಸುಖವನ್ನುಂಡು ತೇಗಿ ಬಂದೆ ಎಂದು ಗಣಪತಿಯು ಶಿವನಿಗೆ ವರದಿ ಸಲ್ಲಿಸುತ್ತಾನೆ. ಆದರೆ, ಇವನ ನಂತರ ಬಂದ ಜೋಕುಮಾರ ಶಿವನಲ್ಲಿಗೆ ಹೋಗಿ ಜನರ ಬವಣೆ ತಿಳಿಸಿ ಅವರ ಕಷ್ಟಕಾರ್ಪಣ್ಯ ನೀಗಿಸಲು ಮಳೆ, ಬೆಳೆ ಚೆನ್ನಾಗಿ ನೀಡಲು ಪ್ರಾರ್ಥಿಸುತ್ತಾನೆ. ಅವನ ಮಾತಿಗೆ ಕಣ್ತೆರೆದ ಶಿವನು ಭೂಲೋಕಕ್ಕೆ ಮಳೆ, ಬೆಳೆ ಕರುಣಿಸುತ್ತಾನೆ ಎಂಬುದು ನಂಬಿಕೆ.
ಈ ಕಾರಣದಿಂದ ಜೋಕುಮಾರನೆಂದರೆ ಎಲ್ಲರಿಗೂ ಪ್ರೀತಿ. ರೈತ ಸಮುದಾಯದ ದೃಷ್ಟಿಯಲ್ಲಿ ಆತ ಆಪದ್ಭಾಂದವನೂ ಹೌದು. ಹೀಗಾಗಿ ಗ್ರಾಮೀಣ ಜನತೆ ಭಕ್ತಿಯಿಂದ ಜೋಕುಮಾರನನ್ನು ಆರಾಧಿಸುತ್ತಾರೆ. ಗಣೇಶನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಬಳಿಕ ವಿಸರ್ಜನೆ ಮಾಡಲಾಗುತ್ತದೆ. ಅಂದೇ ಅಷ್ಟಮಿ ದಿನ ಕೊಡದಲ್ಲಿ ಜೋಕುಮಾರ ಜನಿಸುತ್ತಾನೆ.
ಜೋಕುಮಾರನ ವೈಶಿಷ್ಟ್ಯ: ಜೋಕುಮಾರನ ಆಯುಷ್ಯ ಏಳು ದಿನ ಮಾತ್ರ. 1 ರಿಂದ 2 ಅಡಿ ಎತ್ತರದ ಜೋಕುಮಾರನ ಮೂರ್ತಿಯನ್ನು ಆಯಾ ಗ್ರಾಮಗಳಲ್ಲಿನ ಪತ್ತಾರರು ತಯಾರಿಸುತ್ತಾರೆ. ಜೋಕುಮಾರನ ಮೂರ್ತಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ಎಡ, ಬಲಕ್ಕೆ ಬೇವಿನ ಸೊಪ್ಪು, ಹೂ, ಪತ್ರಿಗಳಿಂದ ಶೃಂಗರಿಸಿ ಅಲಂಕರಿಸಲಾಗಿರುತ್ತದೆ. ಆ ಬುಟ್ಟಿಯನ್ನು ಬಾರಕೇರ ಮನೆತನದ ಮಹಿಳೆಯರು ತಲೆ ಮೇಲೆ ಹೊತ್ತು ಊರ ಗೌಡರ ಮನೆಗೆ ಹೋಗುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಬಳಿಕ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಪ್ರತಿ ಮನೆಗೆ ತೆರಳಿ ಜೋಕುಮಾರನ ಕುರಿತು ಜನಪದ ಧಾಟಿಯ ಪದಗಳನ್ನು ಹಾಡುತ್ತ ರಂಜಿಸುತ್ತಾರೆ. ಆಗ ಪ್ರತಿ ಮನೆಯವರು ದವಸ ಧಾನ್ಯ, ಎಣ್ಣೆ, ಬೆಣ್ಣೆ ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಭಕ್ತಿ ಪೂರ್ವಕವಾಗಿ ನೀಡುತ್ತಾರೆ. ಅದಕ್ಕೆ ಪ್ರತಿಯಾಗಿ ಜೋಳದಿಂದ ತಯಾರಿಸಿದ ಅಂಬಲಿ (ಹುಳಿ ನುಚ್ಚು) ಅಳಲಾಗಿ ಕುಂಬಳ ಇಲ್ಲವೆ ಔಡಲ ಎಲೆಯಲ್ಲಿ ಕೊಡುತ್ತಾರೆ. ಅದನ್ನು ಹೊಲದಲ್ಲಿ ಹೂತರೆ ಫಸಲು ಸಮೃದ್ಧವಾಗಿ ಬರುತ್ತದೆ ಎಂಬುದು ರೈತರ ನಂಬಿಕೆ.
ಕರೊನಾ ಐತೆಂತ ಬಿಡಾಕ್ ಬರೋದಿಲ್ಲ…
ಕರೊನಾ ಬಂದು ನೆಮ್ಮದಿ ಇಲ್ದಾಂಗ ಮಾಡೇತ್ರಿ. ಹಬ್ಬ ಹರಿದಿನ ಆಚರಿಸೋದು ಕಷ್ಟ ಆಗೇತ್ರಿ. ಹಂಗಂತ ಬಿಡಾಕ್ ಆಗಲ್ಲ. ಮಣ್ಣಿನಲ್ಲಿಯೇ ದೇವರನ್ನು ಕಾಣುವ ರೈತರಿಗೆ ಜೋಕುಮಾರ ಆರಾಧಕನಾಗಿದ್ದಾನೆ. ನಾವು ಕೊಡುವ ಪ್ರಸಾದ ರೂಪದ ಜೋಳದ ಅಂಬಲಿಯನ್ನು ಹೊಲಗಳಿಗೆ ಒಯ್ದು ಚರಗ ಚೆಲ್ಲುತ್ತಾರೆ. ಇದರಿಂದ ಭೂತಾಯಿ ತನ್ನ ಮಗ ಸಿಕ್ಕನೆಂದು ಹರುಷ ಪಟ್ಟು ಸಮೃದ್ಧ ಮಳೆ, ಬೆಳೆ ಕೊಡತಾಳ್ರಿ ಎಂದು ಜೋಕುಮಾರನ ಹೊತ್ತು ತಿರುಗುವ ರೇಣುಕಾ ಬಾರಕೇರ, ಹನುಮವ್ವ ಬಾರಕೇರ, ಯಲ್ಲಮ್ಮ ಬಾರಕೇರ, ಬಸವಣ್ಣೆವ್ವ ಬಾರಕೇರ ಪ್ರತಿಕ್ರಿಯಿಸಿದರು.