ಜೈವಿಕಾಸ್ತ್ರ ಬಳಿಕ ಚೀನಾದ ಬಿತ್ತನೆ ಬೀಜಾಸ್ತ್ರ? ; ಕೃಷಿ ಇಲಾಖೆಯಿಂದಲೇ ರೈತರಿಗೆ ಎಚ್ಚರಿಕೆ ; ಭೂಮಿಯ ಫಲವತ್ತತೆ ನಶಿಸುವ ಅಪಾಯ

chia-seed-300
Published on

ತುಮಕೂರು : ಚೀನಾದಿಂದ ಕರೊನಾ ವೈರಾಣು ಬಳಿಕ ಈಗ ಅಪಾಯಕಾರಿ ಬಿತ್ತನೆ ಬೀಜ ರವಾನಿಸುವ ಸಾಧ್ಯತೆ ಎದುರಾಗಿದೆ. ಅನಾಮಧೇಯ ಹೆಸರಲ್ಲಿ ಮನೆಬಾಗಿಲಿಗೆ ಭೂಮಿಯ ಫಲವತ್ತತೆ ನಾಶ ಮಾಡುವ ಬಿತ್ತನೆ ಬೀಜ ಬರುವ ಅಪಾಯವಿದ್ದು ರೈತರೇ ಎಚ್ಚರ... ಎಚ್ಚರ !

ಕರೊನಾ ವೈರಾಣು ದಾಳಿಯಿಂದ ಇಡೀ ಜಗತ್ತೇ ನಲುಗಿದೆ. ಜೈವಿಕಾಸ್ತ್ರದ ಬಳಿಕ ಚೀನಾ ಈಗ ಬಿತ್ತನೆ ಬೀಜವನ್ನು ಕೊರಿಯರ್, ಅಂಚೆ ಮೂಲಕ ರವಾನಿಸಿ ಪರಿಸರ ನಾಶಕ್ಕೆ ಮುಂದಾಗಿರುವ ಆತಂಕ ಕಾಡುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂತಹ ಕೊರಿಯರ್‌ಗಳನ್ನಾಗಲಿ, ಅಂಚೆಯನ್ನಾಗಲಿ ಸ್ವೀಕರಿಸದಂತೆ ರೈತರನ್ನು ಎಚ್ಚರಿಸಿದೆ.

ರೈತರಿಗೆ ಬಿತ್ತನೆ ಬೀಜ ಕಳುಹಿಸುತ್ತಿರುವ ಬಗ್ಗೆ ರಾಜ್ಯದ ವಿವಿಧೆಡೆ ದೂರುಗಳಿರುವ ಹಿನ್ನೆಲೆಯಲ್ಲಿ ರೈತರು ಜಾಗೃತರಾಗಿರಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಮನವಿ ಮಾಡಿದೆ. ಕೀಟ ಹಾಗೂ ರೋಗಾಣುಗಳಿಂದ ಕೂಡಿರುವ ಈ ಬೀಜ ಬಿತ್ತಿದರೆ ಬೆಳೆ ಸಂಪೂರ್ಣ ನಾಶವಾಗುವುದಲ್ಲದೆ, ಭೂಮಿಯ ಲವತ್ತತೆ ಕೂಡ ನಶಿಸುವ ಅಪಾಯವಿದೆ.

ಕೆನಡಾ, ಇಂಗ್ಲೆಂಡ್‌ಗೂ ರವಾನೆ: ಚೀನಾದಿಂದ ಇಂಗ್ಲೆಂಡ್, ಕೆನಡಾ ಮತ್ತಿತರ ದೇಶಗಳಿಗೂ ಇಂತಹ ಬಿತ್ತನೆ ಬೀಜ ಕಳುಹಿಸಿರುವ ಮಾಹಿತಿ ಇದೆ. ವಿವಿಧ ಬೀಜಗಳ ಪೊಟ್ಟಣಗಳು ಬರುತ್ತಿರುವ ಬಗ್ಗೆ ವರದಿ ಇದೆ. ಎಲ್ಲಿಂದ ಯಾರು ಕಳುಹಿಸುತ್ತಾರೆಂಬ ಮಾಹಿತಿ ಇಲ್ಲ. ಈ ಬಿತ್ತನೆ ಬೀಜದಿಂದ ಕೃಷಿಗೆ ಗಂಡಾಂತರ ಬಂದೊಂದಗಲಿದೆಯಲ್ಲದೆ, ಭೂಮಿ ಬಂಜರಾಗುವ ಸಾಧ್ಯತೆ ಇದೆ.

ನಮ್ಮ ದೇಶಕ್ಕೂ ಚೀನಾದಿಂದ ಇಂತಹ ಅಪಾಯಕಾರಿ ಬಿತ್ತನೆಬೀಜ ರವಾನಿಸುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ಇವನ್ನು ಬಳಸದಂತೆ ಅನ್ನದಾತರನ್ನು ಎಚ್ಚರಿಸಿದೆ. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ಗಳಲ್ಲಿ ಬಿತ್ತನೆಬೀಜ ತರಿಸಿಕೊಳ್ಳುವ ಸಾಹಸಕ್ಕೆ ಯಾರೂ ಕೈಹಾಕಬಾರದು.

ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ: ಮುಂಗಾರು ಚುರುಕಾಗಿದ್ದು ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆ ಗರಿಗೆದರಿದ್ದು ರೈತ ಸಂಪರ್ಕ ಕೇಂದ್ರದಲ್ಲೇ ಗುಣಮಟ್ಟದ ರಾಗಿ, ಶೇಂಗಾ, ತೊಗರಿ, ಭತ್ತ, ಅಲಸಂದೆ, ಮುಸಕಿನಜೋಳದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ.

ಆಘಾತಕಾರಿ ಬಿತ್ತನೆ ಬೀಜವನ್ನು ಚೀನಾದಿಂದ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ವಿವಿಧ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು, ಎಲ್ಲಿಂದ ಕಳುಹಿಸಿರುತ್ತಾರೆ ಎಂಬ ವಿವರ ಲಭ್ಯವಿಲ್ಲ. ಇಂತಹ ಪೊಟ್ಟಣ ಬಂದರೆ ಸ್ವೀಕರಿಸದೆ ರೈತರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಸುಟ್ಟುಹಾಕಬೇಕು. ರಾಜಸುಲೋಚನಾ, ಜಂಟಿ ಕೃಷಿ ನಿರ್ದೇಶಕಿ ಗಂಡಾಂತರಕಾರಿ ಬಿತ್ತನೆ ಬೀಜಗಳು ವಿದೇಶಗಳಿಂದ ಬರುತ್ತಿವೆ ಎಂಬ ಮಾಹಿತಿ ಇದೆ. ಆದರೆ, ಕೃಷಿ ಇಲಾಖೆ ಚೀನಾದಿಂದ ಬರುವ ಬಿತ್ತನೆಬೀಜಗಳನ್ನು ಸ್ವೀಕರಿಸದಂತೆ ಸೂಚನೆ ನೀಡಿದೆ. ಅದರ ಬದಲು ಚೀನಾ ಗಡಿಯಲ್ಲೇ ಇಂತಹ ಅಪಾಯಕಾರಿ ಬಿತ್ತನೆಬೀಜಗಳು ದೇಶ ಪ್ರವೇಶಿಸದಂತೆ ಕ್ರಮವಹಿಸಲಿ. ಎ.ಗೋವಿಂದರಾಜು, ಜಿಲ್ಲಾಧ್ಯಕ್ಷ, ರೈತ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net