ಜೈವಿಕ ಉತ್ತೇಜಕ, ಕ್ರಿಮಿನಾಶಕಗಳಿಗೆ ಜಿಎಸ್‌ಟಿ ವಿನಾಯಿತಿಗೆ ಪ್ರಯತ್ನ : ಪ್ರತಾಪ್ ಸಿಂಹ

prathap simha
Published on

ಮೈಸೂರು: ಜೈವಿಕ ಉತ್ತೇಜಕ ಮತ್ತು ಕ್ರಿಮಿನಾಶಕಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ಭರವಸೆ ನೀಡಿದರು.

ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ ಬಿತ್ತನೆಬೀಜ ಮತ್ತು ಕೀಟ ನಾಶಕ ಮಾರಾಟಗಾರರ ಸಂಘದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾ ಡಿದರು.

ಜೈವಿಕ ಉತ್ತೇಜಕ ಮತ್ತು ಕ್ರಿಮಿನಾಶಕಗಳಿಗೆ ಶೇ.5 ರಿಂದ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಜಿಎಸ್‌ಟಿ ವಿನಾಯತಿ ನೀಡಲು ರಾಸಾಯನಿಕ ಮತ್ತು ರಸಗೊಬ್ಬರಗಳ ಮಂತ್ರಾಲಯ ಸಚಿವ ಭಗವಂತ ಖೂಬಾ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ನ್ಯಾನೋ ಗೊಬ್ಬರ ಬಳಕೆಯಿಂದ ಉತ್ತಮ ಬೆಳೆ ಪಡೆಯಬಹುದು. ನಮ್ಮ ತೋಟದಲ್ಲೂ ನ್ಯಾನೋ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆದಿದ್ದೇವೆ. ದ್ರವರೂಪದಲ್ಲಿರುವ ನ್ಯಾನೊ ರಸಗೊಬ್ಬರವನ್ನು ಬೆಳೆಗಳಿಗೆ ಸಿಂಪಡಿಸಿದರೆ ಉತ್ತಮ ಇಳುವರಿ ದೊರೆಯುತ್ತದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್. ಚಂದ್ರಶೇಖರ್, ಚಾಮರಾಜನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ಮಧುಸೂಧನ್, ಮೈಸೂರು ವಿಭಾಗದ ಜಂಟಿ ತೋಟಗಾರಿಕೆ ನಿರ್ದೇಶಕ ಡಾ.ಎಚ್.ಎಂ. ನಾಗರಾಜ್, ಸಂಘದ ಅಧ್ಯಕ್ಷ ಎಂ.ಎ. ನಂಜಪ್ಪ, ಗೌರವಾಧ್ಯಕ್ಷ ಯೋಗರಾಜ್, ಉಪಾಧ್ಯಕ್ಷ ಬಿ.ಪಿ. ಶಿವಪ್ರಕಾಶ್, ಕಾರ್ಯದರ್ಶಿ ಕೆ. ಕಿರಣ್, ಜಂಟಿ ಕಾರ್ಯದರ್ಶಿ ಕೆ.ಅಂಬಿಕಾ ಚರಣವಾಡಿ, ಖಜಾಂಚಿ ಮೋಹನ್‌ಗೌಡ, ಮಾಜಿ ಅಧ್ಯಕ್ಷರಾದ ಟಿ.ಮಹಂತೇಶ್, ಕೆ. ಶಿವಪ್ರಕಾಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net