

ಕಲಬುರಗಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ಪ್ರಕರಣ ಮರೆಮಾಚುವ ಮುನ್ನವೇ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲೂ ಅಪರಾಧಿಗಳು ಐಶಾರಾಮಿ ಜೀವನ, ಗಾಂಜಾ ಸೇದುತ್ತಿರುವ ವಿಡಿಯೋ ವೈರಲ್ ಆಗಿದೆ.
ಪುಡಿ ರೌಡಿಗಳು ವಿಡಿಯೋ ಕಾಲ್‌ನಲ್ಲಿ ಮಾತನಾಡುವ ದೃಶ್ಯ ಹರಿದಾಡುತ್ತಿದ್ದು, ಅಪರಾಧಿಗಳ ಬಳಿ ಸ್ಮಾರ್ಟ್ ಫೋನ್, ಇಯರ್ ಫೋನ್, ಮದ್ಯ, ಗಾಂಜಾ ಕಂಡು ಬಂದಿದೆ. ವಿಡಿಯೋದಲ್ಲಿರುವುದು ಕೊಲೆ ಸೇರಿ ವಿವಿಧ ಪ್ರಕರಣಗಳಲ್ಲಿನ ಅಪರಾಧಿಗಳಾಗಿರುವ ವಿಶಾಲ, ಸಾಗರ, ಸೋನು ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಲು ಹೊರಗೆ ಇರುವವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ ಎನ್ನಲಾಗಿದೆ. ಸೆ.17ರಂದೇ ದೃಶ್ಯ ಸೆರೆಯಾಗಿರುವ ಬಗ್ಗೆ ವಿಡಿಯೋದಲ್ಲಿ ತಿಳಿಯುತ್ತಿದ್ದು, ವಾಟ್ಸ್ಪ್ ಕಾಲ್ ಮೂಲಕ ಹೊರಗೆ ಇರುವ ರೌಡಿಗಳು, ಸಂಬಂಧಿಕರನ್ನು ಮಾತನಾಡಿಸುತ್ತಿದ್ದಾರೆ. ಮಾತನಾಡುವ ವೇಳೆಯಲ್ಲೇ ಮದ್ಯಪಾನ, ಗಾಂಜಾ ಸೇವನೆ ನಡೆಯುತ್ತಿದೆ.
ಪೊಲೀಸರ ದಾಳಿ ಮೊಬೈಲ್ ವಶಕ್ಕೆ: ಕಲಬುರಗಿ: ಕೇಂದ್ರ ಕಾರಾಗೃಹದ ವಿಡಿಯೋ ವೈರಲ್ ಬಂದ ಬೆನ್ನಲ್ಲೆ ಎಚ್ಚೆತ್ತ ನಗರ ಪೊಲೀಸರು ಸೋಮವಾರ ಮಧ್ಯಾಹ್ನ ಜೈಲಿನ ಮೇಲೆ ದಾಳಿ ನಡೆಸಿದ್ದು, ಸುದೀರ್ಘ ನಾಲ್ಕು ಗಂಟೆಗೂ ಹೆಚ್ಚಿನ ಕಾಲ ತಪಾಸಣೆ ನಡೆಸಲಾಗಿದೆ. ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ೮೦ ಅಧಿಕ ಸಿಬ್ಬಂದಿಯಿAದ ದಾಳಿ ನಡೆಸಿದ್ದು, ದಾಳಿ ವೇಳೆ ಎರಡು ಮೊಬೈಲ್ ಫೋನ್, ರಾಡ್, ಬಿಡಿ, ಸಿಗರೇಟ್, ಗುಟ್ಕಾ ಪ್ಯಾಕೇಟ್ ಸಿಕ್ಕಿವೆ.
ಜೈಲ್ ಮೇಲೆ ದಾಳಿ ನಡೆಸಿದ್ದು, ವಿಡಿಯೋ ಕಾಲ್ ಮಾಡಿ ಮಾತನಾಡಿರುವ ಆರೋಪಿಗಳ ಫೋನ್ ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ ವಿಚಾರಣಾಧಿನ ಕೈದಿಗಳಾದ ವಿನೋದ, ಸಾಗರ, ಸೋನುನನ್ನು ವಿಚಾರಣೆ ಮಾಡಲಾಗಿದೆ. ಅವರ ಬಳಿಯಿಂದ ಫೋನ್ ವಶಕ್ಕೆ ಪಡೆಯಲಾಗಿದೆ. ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| ಡಾ.ಶರಣಪ್ಪ ಎಸ್.ಡಿ.
ನಗರ ಪೊಲೀಸ್ ಆಯುಕ್ತ