

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣ, ಉಗ್ರ ಜುಲ್ಫಿಕರ್ ಅಲಿಯಿಂದ ಜೈಲಾಧಿಕಾರಿಗಳು, ಸಹ ಕೈದಿಗಳಿಗೆ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಎಸ್‌ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅ.೧೦ರಂದು ಕಾರಾಗೃಹ ಐಜಿ ಮಳಿನಿ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ಬಳಿಕ ತನಿಖೆ ಸೂಚಿಸಿದ್ದು, ಈ ಮಧ್ಯೆ ಉಗ್ರ ಜುಲ್ಫಿಕರ್ ಆಡಿಯೋ ಲೀಕ್, ಬ್ಲಾಕ್‌ಮೇಲ್ ಪ್ರಕರಣ ಕುರಿತು ಯಶೋಧಾ ವಂಟಗೋಡಿ ಶುಕ್ರವಾರ ಜೈಲಿನ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಜೈಲಿನ ವ್ಯವಸ್ಥೆ, ಕೈದಿಗಳ ಸಂಪರ್ಕ ಸೇರಿ ವಿವಿಧ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಶನಿವಾರವೂ ತನಿಖೆ ಮುಂದುವರಿಯಲಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ತನಿಖೆ ನಡೆಸಿ, ವರದಿ ನೀಡುವೆ: ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ಬಂದಿದ್ದೇನೆ. ಪ್ರಾಥಮಿಕ ತನಿಖೆಗೆ ಜವಾಬ್ದಾರಿ ನನಗೆ ನೀಡಲಾಗಿದೆ. ವಿಚಾರಣೆ ನಡೆಸಿ ವರದಿ ನೀಡುತ್ತೇನೆ ಎಂದು ಕಾರಾಗೃಹ ಎಸ್‌ಪಿ ಯಶೋಧಾ ವಂಟಗೋಡಿ ಹೇಳಿದರು.
ಕೇಂದ್ರ ಕಾರಾಗೃಹದಲ್ಲಿನ ಹಗರಣ ಹಿನ್ನೆಲೆಯಲ್ಲಿ ಶುಕ್ರವಾರ ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲಿಸಿ, ವಿಚಾರಣೆ ನಡೆಸಿ ಮಾತನಾಡಿ, ಅ.೯ರಂದು ಹೊರಬಂದ ಪ್ರಕರಣ ಮತ್ತು ಆಡಿಯೋ ಲೀಕ್ ಕುರಿತು ಮಾಧ್ಯಮದಲ್ಲಿ ಬಂದಿರುವ ವರದಿಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ವೇಳೆ ಯಾವುದೇ ಮಾಹಿತಿ ಹೇಳಲು ಬರುವುದಿಲ್ಲ. ಎಲ್ಲವನ್ನು ತನಿಖೆ ಮಾಡಿಯೇ ವರದಿ ಸಲ್ಲಿಸಲಾಗುವುದು. ವರದಿ ನಂತರ ಇಲಾಖೆ ಡಿಜಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.