ಜೈಲು ಹಕ್ಕಿಯಾಗಿ ನಟ ದರ್ಶನ್

29 yerriswamy 01
Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗುರುವಾರ ಬೆಳ್ಳಗೆ 9.52 ವೇಳೆಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಬೆಳಗಿನ ಜಾವ ನಾಲ್ಕರ ಸುಮಾರಿನಲ್ಲಿ ಬೆಂಗಳೂರಿನ ಪರಪ್ಪನ ಆಗ್ರಹಾರದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಿತು. ಬಿಗಿ ಭದ್ರತೆ ನಡುವೆ ಪೊಲೀಸ್ ಟಿ.ಟಿ. ವಾಹನದಲ್ಲಿ ಸುಮಾರು ಐದು ಗಂಟೆಗಳ ಪ್ರಯಾಣದ ಬಳಿಕ ಬಳ್ಳಾರಿ ಜೈಲು ಸೇರಿದರು. ಸಿಬ್ಬಂದಿ ಹಾಗೂ ವೈದ್ಯರು ಆರೋಗ್ಯ ತಪಾಸಣೆ ನಡೆಸಿ, ಜೈಲಿನ ಒಳಭಾಗದ ಬಲಗಡೆಯಿರುವ ಭದ್ರತೆ ಕೊಠಡಿಯಲ್ಲಿ ದರ್ಶನ್ ಹೆಸರನ್ನು ನೊಂದಾಯಿಸಿಕೊಂಡು ಸೆಲ್‌ಗೆ ಕಳುಹಿಸಲಾಯಿತು. ಆರೋಪಿ ಖ್ಯಾತ ನಟನಾಗಿದ್ದರಿಂದ ಸಂಚಾರಿಸುವ ಮಾರ್ಗದಲ್ಲಿ ಅಭಿಮಾನಿಗಳು ಸೇರುವ ಸಾಧ್ಯಯಿಂದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಕೂಲಿಂಗ್ ಗ್ಲಾಸ್ ಬಿಡದ ದರ್ಶನ್ : ನಟ ದರ್ಶನ್ ಬ್ಲಾಕ್ ಟಿ ಶರ್ಟ್, ಬ್ಲೂ ಪ್ಯಾಂಟ್ ಧರಿಸಿದ್ದರು. ಬಲಗೈಯಲ್ಲಿ ನೀರಿನ ಬಾಟಲಿ, ಇನ್ನೊಂದು ಕೈಯಲ್ಲಿ ಬೆಡ್‌ಶೀಟ್ ಹಾಗೂ ಟೀಶರ್ಟ್ ಮೇಲೆ ಕೂಲಿಂಗ್ ಗ್ಲಾಸ್ ಹಾಕಿಕೊಂಡೆ ಜೈಲಿನೊಳಗೆ ಪ್ರವೇಶಿಸಿದರು. ಜೈಲು ಪ್ರವೇಶಿಸುತ್ತಿದ್ದಂತೆ ಜೈಲು ಸಿಬ್ಬಂದಿಯು ಕೈದಿ ಸಂಖ್ಯೆ 511 ನೀಡಲಾಯಿತು. ಜೈಲಿನ ಮೆನು ಚಾಟ್‌ನ ಅನ್ನ, ಚಪಾತಿ ತಿನ್ನಲು ನಿರಾಕರಿಸಿದರು. ಐದು ಗಂಟೆಗಳ ಪ್ರಯಾಣದಿಂದ ಸುಸ್ತಾಗಿದ್ದ ದರ್ಶನ್ ಸೆಲ್‌ನಲ್ಲಿ ವಿಶ್ರಾಂತಿ ಪಡೆದರು. ನಗರಕ್ಕೆ ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕನಕದುರ್ಗಮ್ಮ ದೇವಸ್ಥಾನದ ಅವರಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಜೈ ಡಿ ಬಾಸ್, ನಮ್ಮನೆ ದೇವರು ಡಿ ಬಾಸ್ ಎಂದು ಘೋಷಣೆ ಕೂಗಿದರು. ಅಲ್ಲದೆ, ದರ್ಶನ್ ಇದ್ದ ವಾಹನ ಜೈಲು ರಸ್ತೆಗೆ ತಿರುಗಿ ಬಳಿಕ ಹಿಂಬದಿಯ ಪೊಲೀಸ್ ವಾಹನವು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕೆಲ ಕಾಲ ಟ್ರಾಫಿಕ್ ಸಮಸ್ಯೆ ತಂದಿತು. ಜೈಲು ರಸ್ತೆಯ ಎರಡು ಬದಿಯಲ್ಲಿ ಸಾರ್ವಜನಿಕರು ಸಂಚಾರಿಸದಂತೆ ಬ್ಯಾರಿಕೇಡ್ ಅಳವಡಿಸಿ ನಿಷೇಧ ಹೇರಲಾಗಿತ್ತು. ದರ್ಶನ್ ಜೈಲು ಪ್ರವೇಶಿಸಿದ ಬಳಿಕ ಸಂಚಾರಕ್ಕೆ ಅನವು ಮಾಡಿಕೊಡಲಾಯಿತು. ಕೆಲ ಕಾಲೇಜು ಯುವಕರು ಜೈಲು ಮುಂಭಾಗಕ್ಕೆ ಬಂದು ದರ್ಶನ್‌ಗಾಗಿ ಕಾದು ಕುಳಿತರು. ಸ್ಥಳಾಂತರಕ್ಕೂ ಮುನ್ನ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಎಸ್ಪಿ ಡಾ.ವಿ.ಜೆ. ಶೋಭಾರಾಣಿ, ಜೈಲು ಅಧೀಕ್ಷಕಿ ಲತಾ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ದರ್ಶನ್ ಜೈಲು ಸೇರುವ ಮುನ್ನ ಆ ರಸ್ತೆಯಲ್ಲಿಯೇ ಹಸುಗಳು ಸಂಚಾರಿಸಿದವು, ಅವುಗಳನ್ನು ಓಡಾಡಿಸಲು ಪೊಲೀಸರು ಹರಸಾಹಸ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net