ಜೈಲಿನಿಂದಲೇ ಸಾಮಾನ್ಯ ಸಭೆಗೆ ಹಾಜರ್!

22Ravig4
ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಪುರಸಭೆ ಸಾಮಾನ್ಯ ಸಭೆಗೆ ಹಾಜರಾಗಿರುವುದು.
Published on

ಬೆಳಗಾವಿ: ಕೊಲೆ ಆರೋಪದಡಿ ಜೈಲಿನಲ್ಲಿರುವ ಆರೋಪಿ ವಿಡಿಯೋ ಕಾಲ್ ಮೂಲಕ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪುರಸಭೆ ಸಾಮಾನ್ಯ ಸಭೆಗೆ ಹಾಜರಾಗಿ ತನ್ನ ವಾರ್ಡ್ ಕುರಿತು ಚರ್ಚೆ ನಡೆಸಿರುವ ಘಟನೆ ಬುಧವಾರ ನಡೆದಿದೆ.

ಬೆಳಗಾವಿ ಹಿಂಡಲಗಾ ಕಾರ್ಯಗೃಹದಲ್ಲಿರುವ ಸಂಕೇಶ್ವರ ಪುರಸಭೆಯ 14ನೇ ವಾರ್ಡಿನ ಬಿಜೆಪಿ ಸದಸ್ಯ, ವಿಚಾರಣಾಧೀನ ಕೈದಿ ಉಮೇಶ ಕಾಂಬಳೆ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆದು ಸಾಮಾನ್ಯ ಸಭೆಗೆ ವಿಡಿಯೋ ಕಾಲ್ ಮೂಲಕ ಹಾಜರಾಗಿದ್ದಾನೆ. ಸಭೆಯ ಚಿತ್ರೀಕರಣ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಉಮೇಶ ಕಾಂಬಳೆ 2022ರ ಜ.4ರಂದು ಸಂಕೇಶ್ವರ ಪಟ್ಟಣದ ಮಹಿಳೆಯನ್ನು ಕಂಟ್ರಿ ಪಿಸ್ತೂಲ್ ಬಳಸಿ ಗುಂಡಿಕ್ಕಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜ.20ರಂದು ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದಾನೆ. ಸದ್ಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಉಮೇಶ ಕಾಂಬಳೆ ಜೈಲಿನಿಂದ ವಿಡಿಯೋ ಕಾಲ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾನೆ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಹಿಂಡಲಗಾ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ, ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶದ ಮೇರೆಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net