ಜೈನರ ನಡೆ ಎಂದಿಗೂ ಧರ್ಮದ ಕಡೆ

10 smg 7
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಮಹಾವೀರ ಜಯಂತಿಯನ್ನು ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಬಲ್ಕಿಷ್ ಬಾನು, ಎಸ್.ರವಿಕುಮಾರ್, ಎಚ್.ಉಮೇಶ್, ಪೂರ್ಣಿಮಾ ಅಶೋಕಕುಮಾರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಸತ್ಯ, ಅಹಿಂಸೆ ಮತ್ತು ಧರ್ಮಾಚರಣೆ ಮೂಲಕ ಇಡೀ ಸಮಾಜಕ್ಕೆ ಶಕ್ತಿ ನೀಡಿದ ಜೈನ ಸಮಾಜಕ್ಕೆ ನಾವೂ ಶಕ್ತಿ ತುಂಬಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಜಿಲ್ಲಾಡಳಿತ ಹಾಗೂ ಜೈನ ಸಮಾಜದ ವಿವಿಧ ಸಂಘಟನೆಗಳಿಂದ ಗುರುವಾರ ಏರ್ಪಡಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂಸಾ ಪರಮೋ ಧರ್ಮ ಎಂದು ನಂಬಿರುವ ಜೈನರು ಓಡಾಡುತ್ತಲೇ ದೇಶ ಕಟ್ಟಿದವರು. ಅವರ ನಡೆ ಧರ್ಮದೆಡೆಗೆ ಇರುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಅಶಾಂತಿ, ಅಸೂಯೆ, ಅವಿಶ್ವಾಸಕ್ಕೆ ಕಾರಣವೆಂದರೆ ನಮ್ಮಲ್ಲಿರುವ ಐಕ್ಯದ ಕೊರತೆ. ನಾವೆಲ್ಲರೂ ಒಗ್ಗೂಡಬೇಕು. ಅಹಿಂಸೆ ಬಹು ದೊಡ್ಡ ಅಸ. ನಾವೆಲ್ಲ ಇದನ್ನು ಅಳವಡಿಸಿಕೊಳ್ಳಬೇಕು. ಆಸೆಯೇ ದುಃಖಕ್ಕೆ ಕಾರಣ ಎಂದು ಮಹಾವೀರರು ಹೇಳಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವು ನಡೆಯಬೇಕು. ಜೈನ ಸಮುದಾಯದವರು ಸ್ನೇಹಜೀವಿಗಳು, ಆರ್ಥಿಕ ಸುಧಾರಣೆಯಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಮಹಾವೀರರ ಕುರಿತು ಉಪನ್ಯಾಸ ನೀಡಿದ ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯೆ ಪೂರ್ಣಿಮಾ ಅಶೋಕಕುಮಾರ್, ಭಗವಾನ್ ಮಹಾವೀರರು ಸಮಾಜಕ್ಕೆ ತೋರಿದ ಸನ್ಮಾರ್ಗ ಎಷ್ಟು ಪ್ರಮುಖವಾಗಿದ್ದು ಎಂಬುದನ್ನು ನಾವು ಸ್ಮರಿಸಬೇಕು. ಅವರ ಉಪದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಶಾಂತಿ, ಹಿಂಸೆ, ದ್ವೇಷ ತೊಡೆದು ಶಾಂತಿ ನೆಲೆಸಲು ಮಹಾವೀರರು ಶ್ರಮಿಸಿದ್ದರು. ಇವುಗಳ ನಿವಾರಣೆಗೆ ತಮ್ಮ ಬಾಲ್ಯಾವಸ್ಥೆಯಲ್ಲೇ ಸಂಕಲ್ಪ ಮಾಡಿದ್ದರು. ಯೌವ್ವನದಲ್ಲಿ ವೈರಾಗ್ಯದತ್ತ ಸಾಗಿದ ಇವರು ಮುನಿ ದೀಕ್ಷೆ ಪಡೆದು 12 ವರ್ಷ ತಪಸ್ಸಿನಿಂದ ಕೇವಲ ಜ್ಞಾನ ಪಡೆದರು. 30 ವರ್ಷ ಧರ್ಮೋಪದೇಶ ಮಾಡಿದರು. ಮುಕ್ತಿ ಮಾರ್ಗದತ್ತ ನಡೆಯುತ್ತ ಇತರರಿಗೂ ಮಾರ್ಗದರ್ಶನ ಮಾಡಿದ್ದರು ಎಂದು ತಿಳಿಸಿದರು. ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿದರು. ದಿಗಂಬರ ಜೈನ ಸಂಘದ ಅಧ್ಯಕ್ಷ ಜಯರಾಜ ಬಿ. ಪಾಂಡಿ, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ದೇವಿಚಂದ್ ಷಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅನಿಲ್‌ಕುಮಾರ ಭೂಮರಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ಕ್ರಿ.ಪೂ.599ರಲ್ಲಿ ಇಂದಿನ ಬಿಹಾರ ರಾಜ್ಯದಲ್ಲಿ ಜನಿಸಿದ ಮಹಾವೀರರು ಜೈನ ಸಮಾಜದ 24ನೇ ಹಾಗೂ ಕೊನೆಯ ತೀರ್ಥಂಕರ ಎನಿಸಿದ್ದಾರೆ. ಸಮಾಜದಲ್ಲಿ, ವಿವಿಧ ಕಾಲಘಟ್ಟದಲ್ಲಿ ಉದ್ಭವಿಸಿದ ಅಂಧಕಾರ, ಅಜ್ಞಾನ ಹೋಗಲಾಡಿಸಲು ಕ್ರಿಯಾಶೀಲ ಮಹಾಪುರುಷರ ಜನನ ಆಗುತ್ತದೆ. ಹೀಗೆಯೇ ಮಹಾವೀರರ ಜನನವೂ ಆಯಿತು. ಬುದ್ಧ ಹಾಗೂ ಮಹಾವೀರರು ಸಮಕಾಲೀನರು. ಪೂರ್ಣಿಮಾ ಅಶೋಕಕುಮಾರ್ ಡಿವಿಎಸ್ ಪಾಲಿಟೆಕ್ನಿಕ್ ಪ್ರಾಚಾರ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net