

ಹಾಸನ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದಲ್ಲಿ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಜೈನ ಸಂಘದಿಂದ ಸೋಮವಾರ ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ದೊಡ್ಡಬಸೀದಿಯಿಂದ ಹೊರಟ ಮೌನ ಪ್ರತಿಭಟನೆಯು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘಟನೆಯನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ಪ್ರತಿಭಟನಾಕಾರರು ಕೆಲ ಕಾಲ ಧರಣಿ ನಡೆಸಿದರು.
ಹೀರೆಕೋಡಿ ನಂದಿಪರ್ವತ ಆಶ್ರಮದ ಮುನಿಶ್ರೀ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಿ ಮೃತ ದೇಹವನ್ನು ತುಂಡರಿಸಿ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ. ದುಷ್ಕರ್ಮಿಗಳು ಮುನಿಗಳಿಗೆ ಆಶ್ರಮದಲ್ಲಿಯೇ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿ ಕೊಳವೆಬಾವಿಗೆ ಎಸೆದಿದ್ದಾರೆ. 20 ಅಡಿ ಆಳದಲ್ಲಿದ್ದ ಮುನಿಗಳ ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಅಹಿಂಸಾವಾದಿಗಳಾದ ಜೈನ ಮುನಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಎಲ್ಲರೂ ತಲೆ ತಗ್ಗಿಸುವ ವಿಷಯ. ಎಲ್ಲಾ ಜೈನ ಮುನಿ ಮಹಾರಾಜರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
108 ಜೈನ ಮುನಿಮಹಾರಾಜರ ಹತ್ಯೆ ಅತ್ಯಂತ ಖಂಡನೀಯ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಶ್ರವಣಬೆಳಗೊಳ ಸೇರಿ ಇತರೆ ಜೈನ ಕ್ಷೇತ್ರಗಳಿಗೆ ಮುನಿಮಹಾರಾಜರು ವಿಹಾರ ಮಾಡುತ್ತಿರುತ್ತಾರೆ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೈನ ಸಂಘದ ಅಧ್ಯಕ್ಷ ಎಚ್.ಬಿ. ಶಾಂತೀಶ್, ಉಪಾಧ್ಯಕ್ಷರಾದ ಎಚ್.ಎ. ಸುಷ್ಮಾ, ಪ್ರಧಾನ ಕಾರ್ಯದರ್ಶಿ ಎಚ್.ಎ. ಸುದರ್ಶನ್, ಖಜಾಂಚಿ ಎಚ್.ಆರ್. ದೇಶ್ ಭೂಷಣ್, ಸಹ ಕಾರ್ಯದರ್ಶಿ ಎಚ್.ಕೆ. ಜೀವೇಂದ್ರ ಮತ್ತು ಇತರರು ಪಾಲ್ಗೊಂಡಿದ್ದರು.