

ಚಿತ್ರದುರ್ಗ: ನಂದಿಪರ್ವತ ಆಶ್ರಮದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಜೈನ ಸಂಘ, ಜೈನ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಸಮುದಾಯದ ನೂರಾರು ಮಂದಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬರ್ಬರ ಹತ್ಯೆಯಿಂದಾಗಿ ಇಡೀ ನಾಗರಿಕ ಸಮಾಜ ಬೆಚ್ಚಿಬಿದ್ದಿದೆ. ಇದರ ಹಿಂದಿರುವ ದುಷ್ಕರ್ಮಿಗಳು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಮೃಗಗಳಿಗಿಂತಲೂ ಕಡೆಯಾಗಿ ಹತ್ಯೆಗೈದು, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಶ್ರೀಗಳ ಶರೀರ ವಿಕೃತಗೊಳಿಸಲಾಗಿದೆ. ಅಹಿಂಸೆ ಪ್ರತಿಪಾದಿಸುವ ಸಂತರನ್ನು ಹಿಂಸೆಗೆ ಗುರಿಯಾಗಿಸುವುದು ಹೇಯ ಕೃತ್ಯ. ಇಡೀ ಜೈನ ಸಮುದಾಯ, ಅನೇಕ ಮಠಾಧೀಶರು ಈ ಕೃತ್ಯವನ್ನು ಖಂಡಿಸಿದ್ದು, ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆಯಿಂದ ಹಂತಕರನ್ನು ಬಂಧಿಸಲಾಗಿದೆ. ಆದರೆ, ಸಮಾಜದ ಸ್ವಾಸ್ಥೃ ಹಾಳು ಮಾಡುವ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಬೇಕು. ಯಾವ ಕಾರಣಕ್ಕೂ ಕರುಣೆ ತೋರಬಾರದು ಎಂದು ಚಿತ್ರದುರ್ಗ ತಾಲೂಕು ಜೈನ ಸಮುದಾಯ ಅಸಂಘಟಿತ ವಲಯದ ಪದಾಧಿಕಾರಿಗಳು ಕೂಡ ಸರ್ಕಾರಕ್ಕೆ ಆಗ್ರಹಿಸಿದರು.
ದಯವೇ ಧರ್ಮದ ಮೂಲ, ಎಲ್ಲ ಜೀವಿಗಳಲ್ಲಿಯೂ ಸಮತಾ ಭಾವನೆ ಹೊಂದಿದ ಭಗವಾನ್ ಮಹಾವೀರರ ತತ್ವಾದರ್ಶದಂತೆ ಜೈನ ಮುನಿಗಳು, ಸಮುದಾಯ ನಡೆದುಕೊಳ್ಳುತ್ತಿದೆ. ಶಾಂತಿ ಸಂದೇಶ ಸಾರುವ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕು ಎಂದು ಕೋರಿದರು.
ಜೈನ ಸಮುದಾಯದ ಮುಖಂಡರಾದ ಅಶೋಕ್ ಜೈನ್, ರಜಿತ್ ಜೈನ್, ಅಜಿತ್ ಜೈನ್, ಪ್ರೇಮಚಂದ್, ವಿಕ್ರಾಂತ್ ಜೈನ್, ಶ್ರೇಣಿಕ್ ಜೈನ್ ಸೇರಿ ನೂರಾರು ಮಂದಿ ಇದ್ದರು.