ಜೈನಕಾಶಿ ಶ್ರವಣಬೆಳಗೊಳದಲ್ಲಿ ಮಾಂಸದ ಅಂಗಡಿ ನಿಷೇಧಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗ್ರಹ

10_HSN_03
Published on

ಶ್ರವಣಬೆಳಗೊಳ: ಜೈನಕಾಶಿ ಶ್ರವಣಬೆಳಗೊಳ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು ಇಲ್ಲಿ ಮಾಂಸ, ಮಾರಾಟದ ಅಂಗಡಿಗಳಿಗೆ ನಿಷೇಧ ಹೇರಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಗುರುವಾರ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆದ ಭಗವಾನ್ ಮಹಾವೀರರ 2624ನೇ ಜನ್ಮ ಕಲ್ಯಾಣೋತ್ಸವ ಸಮಾರಂಭವನ್ನು ಮಹಾವೀರರ ಪುತ್ಥಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾನು ನಿಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಜೈನ ಧರ್ಮ ಅಹಿಂಸೆ ಪ್ರತಿಪಾದಿಸುತ್ತೆ. ಇನ್ನೊಬ್ಬರಿಗೆ ಹಿಂಸೆ ಮಾಡಬಾರದು. ಆದರೆ ಕ್ಷೇತ್ರದ ಸುತ್ತಲು ಮಾಂಸದಂಗಡಿ ಹಾಗೂ ಮದ್ಯದ ಅಂಗಡಿಗಳು ಹೆಚ್ಚಿವೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸರ್ಕಾರದ ಜತೆ ಮಾತನಾಡುವಂತೆ ಉಪಸ್ಥಿತರಿದ್ದ ಸಚಿವ ಡಿ. ಸುಧಾಕರ್ ಅವರಿಗೂ ಸೂಚಿಸಿದರು.

ಆಹಾರದ ವಿಷಯದಲ್ಲಿ ನಾವು ಕಟ್ಟುನಿಟ್ಟು ಪಾಲಿಸುತ್ತೇವೆ. ಸನಾತನ ಧರ್ಮಕ್ಕೂ ಜೈನ ಧರ್ಮಕ್ಕು ಆಹಾರದಲ್ಲಿ ಸಾಮ್ಯತೆ ಇದೆ. ನಾವು ರಾಜಭವನಕ್ಕೆ ಯಾರೇ ಬಂದರು ಶಾಖಾಹಾರ ಊಟವನ್ನೇ ನೀಡುತ್ತೇವೆ. ರಾಜಭವನದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿ, ತಮ್ಮ ಇಬ್ಬರು ಮೊಮ್ಮಕ್ಕಳಿಗೆ ಜೈನ ಧರ್ಮದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಂತಿ, ಅಹಿಂಸೆ ಮತ್ತು ಕರುಣೆಯ ಪ್ರತೀಕವಾದ ಭಗವಾನ್ ಬಾಹುಬಲಿಯ ಭವ್ಯ ಮೂರ್ತಿಯ ಆರಾಧನಾ ಸ್ಥಳವಾದ ಶ್ರೀಕ್ಷೇತ್ರ ಶ್ರವಣಬೆಳಗೊಳವು ಧರ್ಮ, ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯ ವಿಶಿಷ್ಟ ಕೇಂದ್ರವಾಗಿದೆ. ಶತಮಾನಗಳಿಂದ ತ್ಯಾಗ, ಶಾಂತಿ, ಆಧ್ಯಾತ್ಮಿಕ ಉನ್ನತಿ ಮತ್ತು ಮಾನವೀಯತೆಯ ಕಲ್ಯಾಣದ ಸಂದೇಶವನ್ನು ಹರಡುತ್ತಿದೆ. ಭಗವಾನ್ ಮಹಾವೀರರ ಸಾರ್ವಜನಿಕ ಕಲ್ಯಾಣದ ಪವಿತ್ರ ದಿನದಂದು ನಾವು ಈ ಪವಿತ್ರ ಸ್ಥಳಕ್ಕೆ ಬಂದಿದ್ದೇವೆ. ಇದು ನಮ್ಮ ಸೌಭಾಗ್ಯ ಎಂದರು.

ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಮಾತನಾಡಿ, ಜೈನ ಕಾಶಿಯಲ್ಲಿ ಬೇಕಾಬಿಟ್ಟಿಯಾಗಿ ಮಾಂಸ ಮಾರಾಟದ ಬಗ್ಗೆ ಅಭಿನವ ಚಾರುಶ್ರೀಗಳು ಬೇಸರ ಹೊರ ಹಾಕಿದ್ದಾರೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸಂಬಂಧ ಪಟ್ಟ ಇಲಾಖೆ, ಸ್ಥಳೀಯ ಆಡಳಿತದೊಂದಿಗೆ ಮಾತನಾಡಿ, ಸರ್ಕಾರದ ಕಡೆಯಿಂದಲೂ ಸೂಕ್ತ ಸೂಚನೆ ಕೊಡಿಸುವೆ. ಬೆಳಗೊಳ ಬಿಟ್ಟು, ಬೇರೆಡೆ ಮಾಂಸ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್ ಬಾಲಕೃಷ್ಣ, ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಭಾಗಿಯಾಗಿದ್ದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಜೈನ ಸಮುದಾಯದ ಭಕ್ತರು ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net