ಜೈನ ಸಮುದಾಯದ ಅಭಿವೃದ್ಧಿಗೆ ಪ್ರಯತ್ನ ಜಿಲ್ಲಾ ಸಚಿವ ಡಿ. ಸುಧಾಕರ್ ಭರವಸೆ

CTD BAGAVAN......
Published on

ಚಿತ್ರದುರ್ಗ: ಜೈನ ಹಿಂದು ಧರ್ಮಕ್ಕಿಂತಲೂ ಅತ್ಯಂತ ಪುರಾತನವಾದದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಶ್ರೀ ಗೋಡಿ ಪಾರ್ಶ್ವನಾಥ ಜೈನ್ ಶ್ವೇತಾಂಬರ್‌ಮೂರ್ತಿ ಪೂಜಕ್ ಸಂಘ ಶುಕ್ರವಾರ ನಗರದ ಪ್ರವಾಸಿ ಮಂದಿರ ಬಳಿ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಮಹಾವೀರ ವೃತ್ತದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪುರಾತನ ಹಾಗೂ ಬಹಳ ಶ್ರೇಷ್ಠವಾದ ಜೈನ ಧರ್ಮವನ್ನು ಎತ್ತಿಹಿಡಿಯುವ ಹಾಗೂ ಸಮಾಜ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಡಿ. ದೇವರಾಜ ಅರಸು ಅವರ ಕಾಲದಿಂದಲೂ ಜೈನ ಸಮುದಾಯದ ಒಬ್ಬರು ಸಚಿವರಾಗುತ್ತಾ ಬಂದಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಅಂದಾಜು 100 ಕೋಟಿ ಅನುದಾನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷದ 50 ಕೋಟಿ ರೂ.ಅನುದಾನದಲ್ಲಿ 40 ಕೋಟಿ ರೂ.ಗಳನ್ನು ಸಮುದಾಯದ ನಾನಾ ದೇವಸ್ಥಾನಗಳು, ಸಮುದಾಯ ಭವನಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗಿದೆ. ಚಿತ್ರದುರ್ಗದ ಜೈನ ಸಮುದಾಯದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಅತ್ಯಂತ ಕಠೋರವಾಗಿ ಅಹಿಂಸಾ ಮಾರ್ಗದಲ್ಲಿ ಜೀವಿಸು, ಜೀವಿಸಲು ಬಿಡು ಎಂದು ಜೈನ ಧರ್ಮ ಹೇಳುತ್ತದೆ. ಶ್ರೀ ಕೃಷ್ಣನ ವಾಣಿಯಂತೆ ಯಾರು ಧರ್ಮವನ್ನು ಕಾಪಾಡುತ್ತಾರೊ ಅವರನ್ನು ಧರ್ಮ ಕಾಪಾಡುತ್ತದೆ ಎಂದು ತಿಳಿಸಿದರು.

ಶ್ರವಣಬೆಳಗೊಳದ ಶ್ರೀಗಳು,ಹಿಂದಿನ ಗುರುಗಳ ಮಾರ್ಗದರ್ಶನದಲ್ಲಿ ಮಠವನ್ನು ಬೆಳೆಸಿ, ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಮಾತನಾಡಿ, ಮಹಾತ್ಮ ಗಾಂಧೀಜಿ ಅಹಿಂಸೆ, ಸತ್ಯಕ್ಕಾಗಿ ಹೋರಾಟ ಮಾಡಿದರು. ಈ ಎರಡೂ ಪದಗಳಿಗೆ ಅರ್ಥ ಕೊಟ್ಟಿದ್ದು ಭಗವಾನ್ ಮಹಾವೀರರು. ತಮ್ಮ ಯಾವುದೇ ಕಾರ್ಯಕ್ರಮ, ಸಮಸ್ಯೆಗಳಿಗೆ ತಮ್ಮೊಂದಿಗೆ ಇರುತ್ತೇನೆ ಎಂದು ಸಮುದಾಯಕ್ಕೆ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಶ್ರವಣಬೆಳಗೊಳದ ಸ್ವಸ್ತಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರು ಮಾತನಾಡಿ, ಭಗವಾನ್ ಮಹಾವೀರರು ಭೋದಿಸಿರುವ ಪಂಚಶೀಲ ತತ್ತ್ವಗಳನ್ನು ನಾವೆಲ್ಲರೂ ಪಾಲನೆ ಮಾಡೋಣ. ಮಹಾವೀರರು ತೋರಿದ ದಾರಿಯಲ್ಲಿ ನಾವೆಲ್ಲರೂ ನಡೆದು ಅವರಿಗೆ ಗೌರವ ಸಲ್ಲಿಸೋಣ ಎಂದರು.

ಸಂಸದ ಗೋವಿಂದ ಎಂ. ಕಾರಜೋಳ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ, ಪೌರಾಯುಕ್ತೆ ಎಂ. ರೇಣುಕಾ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಜೈನ ಸಂಘದ ಅಧ್ಯಕ್ಷ ವಸ್ತಿಮಲ್ ಜೈನ್, ಟ್ರಸ್ಟಿಗಳಾದ ಪಿ.ಸೊಭಾಗ್‌ಮಲ್ ಜೈನ್, ಪ್ರೇಮ್‌ಚಂದ್ ಜೈನ್, ಅಶೋಕ್‌ಕುಮಾರ್ ಜೈನ್, ರಂಜಿತ್‌ಕುಮಾರ್ ಜೈನ್ ಇತರರು ಇದ್ದರು.

ಸಮಾರಂಭದ ಬಳಿಕ ಶ್ರೀಗಳನ್ನು ಮೆರವಣಿಗೆ ಮೂಲಕ ರಂಗಯ್ಯನ ಬಾಗಿಲ ಬಳಿ ನೂತನವಾಗಿ ನಿರ್ಮಿಸಿರುವ ಮಹಾವೀರ ದಿಗಂಬರ ಮಂದಿರಕ್ಕೆ ಕರೆದೊಯ್ಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ನಾನಾ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net