ಜೈನ ಸಮಾಜದಿಂದ ಪ್ರತಿಭಟನೆ

30 CRP 04
Published on

ಚನ್ನರಾಯಪಟ್ಟಣ: ಜೈನರ ಪವಿತ್ರ ಕ್ಷೇತ್ರವಾದ ಶ್ರೀ ಸಮ್ಮೇದ ಶಿಖರ್ಜಿಯ ಪವಿತ್ರತೆಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿರುವ ಜಾರ್ಖಂಡ್ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ತಾಲೂಕಿನ ಸಮಸ್ತ ಜೈನ ಸಮಾಜದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಶ್ರವಣಬೆಳಗೊಳದ ಜೈನಮಠದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಆಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಆಲ್ಲಿಂದ ಪಟ್ಟಣದ ಮಕಾನ್ ಬಳಿಯ ಗುರುಭವನದ ಬಳಿಯಿಂದ ತಾಲೂಕು ಜೈನ ಸಮಾಜದ ಸದಸ್ಯರು ಸೇರಿ ನೂರಾರು ಜನರು ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿ ತಲುಪಿ, ಜಾರ್ಖಂಡ್ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರಾಕೃತ ವಿದ್ಯಾಪೀಠದ ನಿರ್ದೇಶಕ ಪ್ರೊ.ಜಯಕುಮಾರ್ ಉಪಾಧ್ಯೆ ಮಾತನಾಡಿ, ಜಾರ್ಖಂಡ್‌ನ ಮಧುಬನ್ ಪ್ರಾಂತ್ಯದಲ್ಲಿರುವ ಶ್ರೀ ಸಮ್ಮೇದ ಶಿಖರ್ಜಿಯ ಬೆಟ್ಟದಲ್ಲಿ 20 ಜೈನ ತೀರ್ಥಂಕರರು ಹಾಗೂ ಮುನಿ ಮಹಾರಾಜರು ಮೋಕ್ಷ ಪಡೆದು ಜೈನರ ಪವಿತ್ರ ಯಾತ್ರಸ್ಥಳವಾಗಿದೆ. 2019ರಲ್ಲಿ ಜಾರ್ಖಂಡ್ ಸರ್ಕಾರವು ಸಮ್ಮೇದ ಶಿಖರ್ಜಿಯನ್ನು ಪ್ರವಾಸಿತಾಣವನ್ನಾಗಿ ಘೋಷಣೆ ಮಾಡಿತ್ತು. ಅದನ್ನು ಪರ್ಯಟನಾ ಸ್ಥಳವನ್ನಾಗಿಸಲು ಮುಂದಾಗಿದೆ. ಆ ಕ್ಷೇತ್ರ ಪುಣ್ಯ ಭೂಮಿ, ತಪಸ್ವಿಗಳ ಭೂಮಿ, ನಮ್ಮ ಮುನಿಮಹನೀಯರು ಮೋಕ್ಷ ಪಡೆದ ಸ್ಥಳ, ನಮ್ಮ ಸಮಾಜದ ಮಂದಿ ಅಲ್ಲಿಗೆ ಭೇಟಿ ನೀಡಿ 20ಜೈನ ತೀರ್ಥಂಕರರ ಸಮಾಧಿಗಳ ದರ್ಶನ ಪಡೆದರೆ ಪಾಪ ಕಳೆದುಕೊಳೆಯುವುದು ಎಂಬ ನಂಬಿಕೆ ಹೊಂದಿದ್ದಾರೆ. ಆಲ್ಲಿನ ಪವಿತ್ರ ನಿರ್ವಾಣ ಭೂಮಿಯನ್ನು 24 ಕಿ.ಮೀ. ನಷ್ಟು ದೂರ ದಿಗಂಬರ, ಶ್ವೇತಾಂಬರ, ಸ್ಥಾನಿಕ, ಮೂರ್ತಿ ಪೂಜೆ ಮಾಡುವ ಎಲ್ಲ ಜೈನ ಸಮಾಜದವರು ಬರಿಗಾಲಲ್ಲಿ ನಡೆದು ಭೂಮಿಯ ಪಾವಿತ್ರತ್ಯೆ ಉಳಿಸಿದ್ದಾರೆ. ಆದರೆ ಆಲ್ಲೀಗ ಪಂಚತಾರಾ ಹೋಟೆಲ್, ಮಸಾಜ್ ಮಳಿಗೆಗಳು, ಹೆಲಿಪ್ಯಾಡ್ ಮಾಡುವ ಮೂಲಕ ವಿಲಾಸಿ ತಾಣವನ್ನಾಗಿಸಿ ಮೋಜು, ಮಸ್ತಿ ಕೇಂದ್ರ ಮಾಡಲು ಹೊರಟಿದೆ ಇದನ್ನು ಈ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ತಹಸೀಲ್ದಾರ್ ಬಿ.ಎಂ.ಗೋವಿಂದ್‌ರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ದಿಗಂಬರ ಜೈನಸಮಾಜ ಅಧ್ಯಕ್ಷ ಪದ್ಮಕುಮಾರ್, ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮೀ, ತೇರಾಪಂಥ್ ಸಮಾಜದ ಅಧ್ಯಕ್ಷ ಗಣಪತಿಲಾಲ್ ಭೋರಾ, ಬಾಹುಬಲಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಾಧ್ಯಕ್ಷ ಡಾ.ಗೊಮ್ಮಟೇಶ್ ರಾವಣ್ಣನವರ್, ಪ್ರಾಂಶುಪಾಲ ಡಾ.ಸುನೀಲ್‌ಕುಮಾರ್, ಕಾರ್ಯದರ್ಶಿ ಭವನ್ ದತ್ತಾವಡೆ, ಗೊಮ್ಮಟವಾಣಿ ಪತ್ರಿಕೆ ಸಂಪಾದಕ ಅಶೋಕ್‌ಕುಮಾರ್, ಸಮಾಜದ ತಾಲೂಕು ಅಧ್ಯಕ್ಷ ವಜ್ರೇಶ್‌ಕುಮಾರ್, ಮಹಿಳಾಧ್ಯಕ್ಷೆ ಯಶೋದಾ ಜೈನ್, ಮುಖಂಡರಾದ ಅಶೋಕ್‌ಕುಮಾರ್, ಸಂಜಯ್‌ಸೇಠ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net