ಜೈನ ಮುನಿ ಹತ್ಯೆ ಖಂಡಿಸಿ ಪ್ರತಿಭಟನೆ

10 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಹಿರೇಕೋಡಿಯ ದಿಗಂಬರ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಜೈನರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಲಾಭವನದಿಂದ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಶ್ರೀಗಳ ಹತ್ಯೆ ನಡೆದಿರುವುದು ಖಂಡನೀಯ. ಈ ಕೃತ್ಯ ಇಡೀ ಸಮುದಾಯವನ್ನು ತಲ್ಲಣಗೊಳಿಸಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರು, ಯಾವ ಧರ್ಮೀಯರಿಗೂ ತೊಂದರೆ ಮಾಡದೆ ಕ್ರಿಮಿ, ಕೀಟಗಳನ್ನು ಸಹ ಹತ್ಯೆ ಮಾಡದ ಸಮಾಜ. ಅಂತಹ ಸಮಾಜದ ಮುನಿಗಳನ್ನು ಅಮಾನುಷವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಸಮಾಜಕ್ಕೆ ಸರ್ಕಾರದಿಂದ ರಕ್ಷಣೆ, ಭದ್ರತೆಯ ಭರವಸೆ ದೊರೆಯಬೇಕಿದೆ ಎಂದು ಆಗ್ರಹಿಸಿದರು.
ಅಹಿಂಸೆಯೇ ಜೈನ ಮುನಿಗಳ ಜೀವಕ್ಕೆ ಸಂಚಕಾರ ತರುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಈ ರೀತಿಯ ಕೃತ್ಯಗಳನ್ನು ಸರ್ಕಾರ ಸರಿಯಾಗಿ ತನಿಖೆ ನಡೆಯಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ಜೈನ ಬಸದಿಗಳು ಹಾಗೂ ಮುನಿಗಳಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಮುನಿಗಳು ಭಯಮುಕ್ತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಶಿವಲೀಲಾ ಕುಲಕರ್ಣಿ, ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ, ದತ್ತಾ ಡೋರ್ಲೆ, ಶಾಂತಿನಾಥ ದಿಬ್ಬದ, ಪಾರ್ಶ್ವನಾಥ ಶೆಟ್ಟಿ, ಫತೇಚಂದ ಸೋಳಂಕಿ, ಅಶೋಕ ಬಾಳಿಕಾಯಿ, ಪಾರ್ಶ್ವನಾಥ ಪತ್ರಾವಳಿ, ಮಹಾವೀರ ಉಪಾಧ್ಯೆ, ವಿಜಯ ಕುರಕುರಿ, ಜಿನೇಂದ್ರ ಕುಂದುಗೊಳ, ತವನಪ್ಪ ಅಷ್ಟಗಿ, ಡಾ ಜಿನದತ್ತ ಹಡಗಲಿ, ನಾಗಪ್ಪ ಕುರಕುರಿ, ನಾಗಪ್ಪ ಚಿಣಗಿ, ಅಶೋಕ ಬಾಗಿ, ಅನುಪಮಾ ರೋಖಡೆ, ಸುಜಾತಾ ಹಡಗಲಿ, ಅನಿಲ ಪೋರವಾಲ, ಲತಾ ಪಾಟೀಲ, ವಿವಿಧ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net