ಜೈನ ತತ್ವ ಎಲ್ಲ ಕಾಲಕ್ಕೂ ಅನ್ವಯ

04 HANUR 1
ಹನೂರಿನಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಶ್ರೀ ಮಹಾವೀರ ಜಯಂತಿಯಲ್ಲಿ ತಹಸೀಲ್ದಾರ್ ಗುರುಪ್ರಸಾದ್, ನಟರಾಜು, ಶೇಷಣ್ಣ, ಲೋಕೇಶ್ ಇತರರಿದ್ದರು.
Published on

ಹನೂರು: ಜೈನ ತತ್ವ ಎಲ್ಲ ಕಾಲಕ್ಕೂ ಅನ್ವಯ ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದರು.

ಪಟ್ಟಣದ ಲೋಕೋಪಯೊಗಿ ಅತಿಥಿ ಗೃಹದ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮನುಷ್ಯರು ಮೋಕ್ಷವನ್ನು ಪಡೆಯಲು ಪಂಚ ಸೂತ್ರಗಳನ್ನು ತಿಳಿಸಿಕೊಟ್ಟಿರುವ ಮಹಾವೀರರ ಬಗ್ಗೆ ಜೈನ ಧರ್ಮೀಯರಲ್ಲಿ ಮಹತ್ವದ ಸ್ಥಾನವಿದೆ. ಜೈನ ಧರ್ಮದ 24ನೇ ಆದಿ ತೀರ್ಥಂಕರ ಮಹಾವೀರರು 30ನೇ ವಯಸ್ಸಿನಲ್ಲಿ ರಾಜಮನೆತನದ ವೈಭೋಗವನ್ನು ತ್ಯಜಿಸಿ 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಕೈವಲ್ಯ ಜ್ಞಾನವನ್ನು ಪಡೆದರು. ಅಹಿಂಸೆ, ಆಸ್ತೇಯ, ಬ್ರಹ್ಮಚರ್ಯ, ಸತ್ಯ ಹಾಗೂ ಅಪರಿಗ್ರಹ ತತ್ವವನ್ನು ಬೋಧಿಸುವುದರ ಮೂಲಕ ಮನುಷ್ಯರು ಮೋಕ್ಷವನ್ನು ಪಡೆಯಲು ಅರ್ಹರು. ಪ್ರತಿ ಆತ್ಮವೂ ಆನಂದಮಯ ಮತ್ತು ಸರ್ವಜ್ಞ. ಸಂತೋಷವು ನಮ್ಮೊಳಗೇ ಇದೆ. ಅದನ್ನು ಹೊರಗೆ ಹುಡುಕಲು ಪ್ರಯತ್ನಿಸಬೇಡಿ. ಪ್ರತಿಯೊಂದು ಜೀವಿಯ ಮೇಲೂ ಕರುಣೆ ಇರಬೇಕು. ದ್ವೇಷವು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಜಗತ್ತಿಗೆ ಮಹಾವೀರರು ಸಾರಿದ್ದಾರೆ. ಈ ಮೂಲಕ ಧರ್ಮ ಪ್ರಚಾರಕರಾಗಿ ವಿಶ್ವಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಜೈನರು ವಾಸಿಸುವ ಪ್ರದೇಶದಲ್ಲಿ ಬಸದಿಗಳನ್ನು ನಿರ್ಮಿಸಿ ಮಹತ್ವದ ಸ್ಥಾನ ನೀಡಿದ್ದಾರೆ ಎಂದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮಹಾವೀರರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಗುರುಪ್ರಸಾದ್ ತಿಳಿಸಿದರು.

ಶಿರಸ್ತೇದಾರ್ ನಟರಾಜು, ಗ್ರಾಮ ಆಡಳಿತ ಅಧಿಕಾರಿಗಳಾದ ಶೇಷಣ್ಣ, ಲೋಕೇಶ್, ನೌಕರರಾದ ಸಿದ್ದರಾಜು, ಪುನೀತ್, ಮೋಹನ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net