ಜೈ ಮಹಾರಾಷ್ಟ್ರ ಎಂದ ಪಾಲಿಕೆ ನೌಕರ

1Manju5
ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಿವೃತ್ತ ಅಧಿಕಾರಿ ಶಿವಾಜಿ ಕಳಸೇಕರ ಅವರನ್ನು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಸೇರಿ ಇತರ ಅಧಿಕಾರಿಗಳು ಸನ್ಮಾನಿಸುತ್ತಿರುವುದು.
Published on

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ಮೇ 31ರಂದು ನಿವೃತ್ತನಾದ ನೌಕರನೋರ್ವ ಜೈ ಮಹಾರಾಷ್ಟ್ರ ಘೋಷಣೆ ಕೂಗುವ ಮೂಲಕ ನಾಡದ್ರೋಹ ಎಸಗಿದ್ದಾನೆ. ಪಾಲಿಕೆಯಲ್ಲಿ 33 ವರ್ಷ ಕರ್ತವ್ಯಗೈದು ನಿವೃತ್ತಿಯಾದ ದ್ವಿತೀಯ ದರ್ಜೆಯ ಸಹಾಯಕ ಶಿವಾಜಿ ಕಳಸೇಕರ ತನ್ನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಕೊನೆಯಲ್ಲಿ ಜೈ ಮಹಾರಾಷ್ಟ್ರ ಎನ್ನುವ ಮೂಲಕ ನಾಡದ್ರೋಹಿ ಕೆಲಸ ಮಾಡಿದ್ದಾನೆ. ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ತೀವ್ರವಾಗಿ ಖಂಡಿಸಿ ನಿವೃತ್ತ ನೌಕರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಸೇರಿ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಜರುಗಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿವಾಜಿ ಕಳಸೇಕರ ತಮ್ಮ ಭಾಷಣದ ಕೊನೆಗೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿದರು. ಅಲ್ಲಿದ್ದ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಮುಜುಗರವಾಯಿತು. ಆದರೆ, ಯಾರೂ ಅವರನ್ನು ಪ್ರಶ್ನಿಸಲಿಲ್ಲ. ಆಕ್ಷೇಪವೆತ್ತಲಿಲ್ಲ ಎಂದು ಪಾಲಿಕೆಯ ಕೆಲ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ.

ನಾಡದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ನಾಡದ್ರೋಹಿ ಕೆಲಸ ಮಾಡಿರುವ ಪಾಲಿಕೆಯ ನಿವೃತ್ತ ನೌಕರರ ವಿರುದ್ಧ ನಾಡದ್ರೋಹಿ ಪ್ರಕರಣ ದಾಖಲಿಸಬೇಕು. ನೋಟಿಸ್ ನೀಡಿ ಕ್ಷಮಾಪಣೆ ಕೇಳಲು ತಿಳಿಸಬೇಕು. ಕ್ಷಮೆ ಕೇಳುವವರೆಗೂ ಅವರ ಪಿಂಚಣಿ ತಡೆಹಿಡಿಯಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಬೀಳ್ಕೊಡುಗೆ ಕಾರ್ಯಕ್ರಮದ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದ ನಿವೃತ್ತ ನೌಕರ ಶಿವಾಜಿ ಕಳಸೇಕರ ಪತ್ರದ ಮೂಲಕ ಕ್ಷಮಾಪಣೆ ಕೇಳಿದ್ದಾನೆ.| ಡಾ.ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net