

ಕಲಬುರಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರದ ೨೦ ಕೆರೆ ತುಂಬುವ ಯೋಜನೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ವಿಧಾನಸಭೆ ಅಧಿವೇಶದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್‌ಸಿಂಗ್ ಪ್ರಶ್ನೆಗೆ ಉತ್ತರಿಸಿದ್ದಾರೆ.
ಜೇವರ್ಗಿಗೆ ಕುಡಿಯುವ ನೀರಿನ ಯೋಜನೆಗೆ ಹಿಂದೆ ೩೦೬ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ೨೦೨೪-೨೫ರ ಬಜೆಟ್‌ನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ೧೩೦ ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಹೆಚ್ಚಿನ ಅನುದಾನ ಅವಶ್ಯವಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಅನುದಾನದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಸದನದಲ್ಲಿ ಮಾತನಾಡಿದ ಡಾ.ಅಜಯಸಿಂಗ್ ಅವರು, ಜೇವರ್ಗಿಯಲ್ಲಿ ನೀರಿನ ಅಭಾವ ನೀಗಿಸಲು ೨೦೨೦ರಲ್ಲಿ ೨೦ ಹೊಸ ಕೆರೆ ನಿರ್ಮಾಣ ಹಾಗೂ ಭೀಮಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬುವ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯಿಂದ ಸರ್ವೆ ನಡೆಸಿ ಡಿಪಿಆರ್ ತಯಾರಿಸಿ ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿ(ಟಿಎಸಿ)ಗೆ ಸಲ್ಲಿಸಲಾಗಿತ್ತು. ೩೦೬ ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಆದರೆ ನಂತರ ಯಾವುದೇ ಚಟುವಟಿಕೆ ನಡೆದಿಲ್ಲ. ಕೂಡಲೇ ಯೋಜನೆಗೆ ಮರುಜೀವ ನೀಡಬೇಕು ಎಂದು ಮನವಿ ಮಾಡಿದರು.
ಮಲ್ಲಬಾದ್ ಏತ ನೀರಾವರಿ ಯೋಜನೆಯಡಿ ಲಿಫ್ಟ್-೧, ಲಿಫ್ಟ್-೨ರ ಅಡಿ ವಿತರಣಾ ಕಾಲುವೆಗಳ ಕಾಮಗಾರಿ ಪೂರ್ಣಕ್ಕೆ ೨೯೫.೨೬ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.