ಜೇಮ್ಸ್ ಎತ್ತಂಗಡಿ ಮಾಡಿದರೆ ಹೋರಾಟ

24Manju2
ಬೆಳಗಾವಿ ನಗರದ ಚಿತ್ರ ಟಾಕೀಸ್ ಆವರಣದಲ್ಲಿ ಪವರ್‌ಸ್ಟಾರ್ ಅಪ್ಪು ಅಭಿಮಾನಿಗಳು ಪ್ರತಿಭಟಿಸಿದರು. ರಾಹುಲ್ ಕೆ. ನಾಯಕ, ಪ್ರವೀಣ ಕೆ.ಎಸ್., ಆರ್.ರಮೇಶ ಇತರರಿದ್ದರು.
Published on

ಬೆಳಗಾವಿ: ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುತ್ತಿರುವ ನಟ ದಿ. ಡಾ.ಪುನೀತ್ ರಾಜ್‌ಕುಮಾರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ತೆಗೆದು ಹಾಕಬಾರದು ಎಂದು ಆಗ್ರಹಿಸಿ ಗುರುವಾರ ಪವರ್‌ಸ್ಟಾರ್ ಅಪ್ಪು ಅಭಿಮಾನಿಗಳು ನಗರದ ಚಿತ್ರ ಟಾಕೀಸ್ ಆವರಣದಲ್ಲಿ ಪ್ರತಿಭಟಿಸಿದರು. ರಾಜ್ಯದ ನೂರಾರು ಚಿತ್ರಮಂದಿರದಲ್ಲಿ ಜೇಮ್ಸ್ ಸಿನಿಮಾ ವೀಕ್ಷಿಸಲು ಜನರು ಪರದಾಡುತ್ತಿರುವ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರು ಪರಭಾಷೆ ಚಿತ್ರಗಳ ವ್ಯಾಮೋಹದಿಂದಾಗಿ ಕನ್ನಡ ಸಿನಿಮಾ ತೆಗೆದುಹಾಕುತ್ತಿದ್ದಾರೆ. ಸರ್ಕಾರವು ಮಧ್ಯಪ್ರವೇಶಿಸಿ ಜೇಮ್ಸ್ ಪ್ರದರ್ಶನ ಮುಂದುವರಿಸುವಂತೆ ಚಿತ್ರಮಂದಿರದ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದರು. ಈಗಾಗಲೇ ಹಿಂದಿ ಕಶ್ಮೀರ್ ಫೈಲ್ಸ್, ಆರ್‌ಆರ್‌ಆರ್ ಸಿನಿಮಾವನ್ನು ಬೆಳಗಾವಿ ಜಿಲ್ಲೆಯ ವಿವಿಧ ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲು ಜೇಮ್ಸ್ ತೆಗೆದು ಹಾಕಲು ಪ್ರಯತ್ನಿಸುತ್ತಿದ್ದಾರೆ. ಜೇಮ್ಸ್ ತೆಗೆದು ಹಾಕಿದರೆ ಚಿತ್ರಮಂದಿರದಲ್ಲಿ ಯಾವುದೇ ಪರಭಾಷೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ. ಸಿನಿಮಾ ತೆಗೆದು ಹಾಕಿದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ರಾಹುಲ್ ಕೆ. ನಾಯಕ, ಪ್ರವೀಣ ಕೆ.ಎಸ್., ಆರ್.ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net