

ಮೂಡಿಗೆರೆ: ಮಾನವ ನಡೆಸುವ ಪರಿಸರ ವಿರೋಧಿ ಚಟುವಟಿಕೆಗಳಿಂದ ಜೇನುನೊಣಗಳು, ದುಂಬಿಗಳ ಸಂತತಿ ನಶಿಸುತ್ತಿವೆ. ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗುವ ಜೇನುನೊಣಗಳು, ದುಂಬಿಗಳನ್ನು ರಕ್ಷಿಸುವುದು ಅಗತ್ಯ ಎಂದು ಮೂಡಿಗೆರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಎಂ.ಎಚ್.ಸುಚಿತ್ರಾಕುಮಾರಿ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ನಡೆದ ವಿಶ್ವ ಜೇನುನೊಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರದಲ್ಲಿ ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗಿರುವ ಜೇನುನೊಣಗಳು ಮತ್ತು ಇತರ ದುಂಬಿಗಳ ಪ್ರಾಮುಖ್ಯತೆ ಮನವರಿಕೆಯಾಗಿದೆ. ಈ ವರ್ಷ ಜೇನುನೊಣಗಳನ್ನು ರಕ್ಷಿಸಲು ಯುವಜನರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಪರಾಗಸ್ಪರ್ಶಕಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ವಿಶ್ವ ಜೇನುನೊಣ ದಿನವನ್ನು ಪ್ರಕೃತಿಯಿಂದ ಪ್ರೇರಿತವಾದ ಜೇನುನೊಣ ನಮ್ಮೆಲ್ಲರನ್ನೂ ಪೋಷಿಸುತ್ತದೆ ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ಎಂ.ಶಿವಪ್ರಸಾದ್ ಮಾತನಾಡಿ, ಬೆಳೆ ಉತ್ಪಾದನೆಯು ಜೇನುಹುಳುಗಳ ಪರಾಗಸ್ಪರ್ಶದ ಮೇಲೆ ಅವಲಂಬಿತವಾಗಿದೆ. ಇವುಗಳಿಂದ ಬೆಳೆಗಳ ಉತ್ಪಾದನೆ ಹೆಚ್ಚಾಗುತ್ತಿದೆ. ಅವುಗಳು ಇಲ್ಲವಾದಲ್ಲಿ ಮಾನವ ಜನಾಂಗ ನಾಲ್ಕು ವರ್ಷಗಳು ಮಾತ್ರ ಉಳಿಯಬಲ್ಲದು ಎಂದು ತಿಳಿಸಿದರು.
ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ರೈತರು ಬೆಳೆ ಉತ್ಪಾದನೆ ಮಾಡುವ ಸಂದರ್ಭದಲ್ಲಿ ಪರಿಸರ ಮತ್ತು ಗುಣಮಟ್ಟ ಗಮನದಲ್ಲಿಟ್ಟುಕೊಂಡು ಜೇನುನೊಣಗಳಿಗೆ ಹಾನಿಯಾಗುವಂತಹ ಚಟುವಟಿಕೆಗಳಾದ ಅರಣ್ಯ ನಾಶ, ಕ್ರಿಮಿನಾಶಕ ಬಳಕೆ ಇತ್ಯಾದಿಗಳನ್ನು ಮಾಡಬಾರದು. ಬದಲಿಗೆ ಅವುಗಳನ್ನು ರಕ್ಷಿಸುವಂತಹ ಕ್ರಮಗಳನ್ನು ನಿರ್ವಹಿಸಬೇಕು. ಯುವಜನರು ಶ್ರಮ ವಹಿಸಿದರೆ ಜೇನು ಸಾಕಣೆಯಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಆಲ್ದೂರಿನ ಜೇನು ಉದ್ದಿಮೆದಾರ ರಂಜಿತ್ ಜೇನು ಸಾಕಣೆ ವಿಧಾನ ತಿಳಿಸಿಕೊಟ್ಟರು. ಕೆವಿಕೆ ವಿಜ್ಞಾನಿಗಳಾದ ಡಾ. ಜಿ.ಎಂ.ಪ್ರಶಾಂತ್, ಡಾ. ಬಿ.ಸುರೇಶ್‌ಕುಮಾರ್, ಸಿಬ್ಬಂದಿ, 76 ಶಿಬಿರಾರ್ಥಿಗಳು ಇದ್ದರು.