

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ಧ ಜೇನುಕಲ್ಲಮ್ಮ ದೇವಿಗೆ ನೂತನವಾಗಿ ನಿರ್ಮಿಸಿರುವ ಶಿಲಾ ಮಂದಿರ ಕಂಗೊಳಿಸುತ್ತಿದೆ. ಇಲ್ಲಿನ ಪರಿಸರದ ನೈಸರ್ಗಿಕ ಸೌಂದರ್ಯ ಇನ್ನಷ್ಟು ಹೆಚ್ಚಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ನೂತನ ಶಿಲಾ ದೇಗುಲಕ್ಕೆ ತೆರಳುವ 108 ಮೆಟ್ಟಿಲುಗಳ ನಿರ್ಮಾಣಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಪಾರ ಭಕ್ತರನ್ನು ಹೊಂದಿರುವ ಮಲೆನಾಡಿನ ಆರಾಧ್ಯ ದೇವಿ ಜನರಿಗೆ ಶ್ರೇಯೋಭಿವೃದ್ಧಿ ನೀಡುತ್ತಿದ್ದಾಳೆ. ಪುರಾತನ ಕಾಲದ ದೇವಾಲಯ ಮಲೆನಾಡಿನ ಸುಂದರ ಪರಿಸರದಲ್ಲಿದ್ದು ಭಕ್ತರನ್ನು ಆಕರ್ಷಿಸುತ್ತಿದೆ ಎಂದರು. ದಿನ ನೂರಾರು ಜನ ಬಂದು ವೀಕ್ಷಿಸುವ ಈ ಪವಿತ್ರ ಸ್ಥಳ ಯಾತ್ರಾ ಸ್ಥಳವಾಗಿ ಮಾರ್ಪಾಡಾಗಿಸಬೇಕು. ಅಂತಹ ಉದ್ದೇಶದಿಂದ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತವರ ವ್ಯವಸ್ಥಾಪನಾ ತಂಡ ಉತ್ತಮ ಯೋಜನೆ ರೂಪಿಸಿ ಸುಂದರ ದೇಗುಲ ನಿರ್ಮಿಸಿದ್ದಾರೆ. ಈ ದೇವಸ್ಥಾನವು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಬೇಕು. ಸರ್ವಭಕ್ತರ ಸಹಕಾರ ಹಾಗೂ ಸರ್ಕಾರದ ಅನುದಾನ ಬಳಸಿಕೊಂಡು ಅಭಿವೃದ್ಧಿ ಕೈಗೊಳ್ಳಲಾಗಿದೆ. ನೂತನ ದೇವಸ್ಥಾನ ನಿರ್ಮಾಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಭಕ್ತರಿಗೂ ದೇವಿ ಇಷ್ಟಾರ್ಥ ನೆರವೇರಿಸಲಿ ಎಂದು ಪ್ರಾರ್ಥಿಸಿದರು. ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ದೇಗುಲ ಸಮಿತಿ ಸದಸ್ಯರಾದ ವಿಜಯೇಂದ್ರ ರಾವ್, ಸುಧೀಂದ್ರ, ಮುಖಂಡರಾದ ಎನ್.ಆರ್.ದೇವಾನಂದ್, ಹಾಲಗದ್ದೆ ಉಮೇಶ, ಸುರೇಶ್ ಸ್ವಾಮಿರಾವ್, ಆಲುವಳ್ಳಿ ವೀರೇಶ್, ಮತ್ತಿಮನೆ ಸುಬ್ರಹ್ಮಣ್ಯ, ತಿಮ್ಮಪ್ಪ, ಹರತಾಳು ರಾಮಚಂದ್ರ, ಎ.ವಿ.ಮಲ್ಲಿಕಾರ್ಜುನ, ಯುವರಾಜ, ತೀರ್ಥೇಶ್ ಇನ್ನಿತರರಿದ್ದರು.
ಜೇನುಕಲ್ಲಮ್ಮ ದೇವಿಗೆ ನೂತನ ದೇವಸ್ಥಾನ ನಿರ್ಮಿಸಲು ಅನೇಕ ದಾನಿಗಳು ಸಹಕಾರ ನೀಡಿದ್ದಾರೆ. ಜತೆಗೆ ಕೆಲವರು ಒಂದಷ್ಟು ಟೀಕೆಗಳನ್ನು ವ್ಯಕ್ತಪಡಿಸಿ ತೊಂದರೆಯನ್ನೂ ನೀಡಿದ್ದಾರೆ. ಆದರೆ ತಾಯಿಯ ಆಶೀರ್ವಾದದಿಂದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇನೆ. ಸಂಸದರಾದ ಬಿ.ವೈ.ರಾಘವೇಂದ್ರ ಅವರು ದೇವಸ್ಥಾನದ ಅಭಿವೃದ್ಧಿಗಾಗಿ 10 ಲಕ್ಷ ರೂ. ನೀಡಿದ್ದಾರೆ. ಬಿ. ಸ್ವಾಮಿರಾವ್ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ