

ರಿಪ್ಪನ್ಪೇಟೆ: ಜೇನು ಗೂಡುಕಟ್ಟುತ್ತಿದ್ದ ಮರಗಳ ಅಭಿವೃದ್ಧಿಗಾಗಿ ನರ್ಸರಿಯಲ್ಲಿ ಗಿಡ ಬೆಳೆಯಲು ಯೋಜಿಸಲಾಗಿದೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಸೋಮವಾರ ಗರ್ತಿಕೆರೆಯಲ್ಲಿ ಅಮೃತ ಜಂಟಿ ಗ್ರಾಮ ಅರಣ್ಯ ಸಮಿತಿ, ಜೀವ ವೈವಿಧ್ಯತಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ಗೊಂಡಾರಣ್ಯ, ಕಾನನದಲ್ಲಿ ಹೇರಳವಾಗಿ ಜೇನು ವಾಸಿಸುತ್ತಿದ್ದು ಅದರ ತುಪ್ಪ ಬಹು ಉಪಯೋಗಿಯಾಗಿ ಬಳಸಲಾಗುತ್ತಿತ್ತು. ಪ್ರಸ್ತುತ ಕಾಲಮಾನದಲ್ಲಿ ನೂರಾರು ಜೇನುಗೂಡುಗಳನ್ನು ಕಟ್ಟುತ್ತಿದ್ದ ಬೃಹತ್ ಮರಗಳು ಅಳಿದಿವೆ. ಇದರಿಂದ ಜೇನು ಸಂತತಿಯೂ ಕಣ್ಮರೆಯಾಗುತ್ತಿದೆ. ಇವುಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಜೇನು ಗೂಡು ಕಟ್ಟುತ್ತಿದ್ದ ಮರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜೇನು ಹೆಚ್ಚಿದಂತೆ ತುಪ್ಪದೊಂದಿಗೆ ಆದಾಯ ನಿರೀಕ್ಷಿಸುವ ಜತೆಗೆ ರೈತರ ಸರ್ವ ಬೆಳೆಗಳ ಇಳುವರಿ ಅಧಿಕವಾಗುತ್ತದೆ. ಇಂತಹ ಅನೇಕ ವಿಚಾರಗಳು ಪ್ರತಿ ಗ್ರಾಮ ಸಮಿತಿಯಲ್ಲಿ ವಿಚಾರ ವಿನಿಮಯಗೊಂಡು ಸರ್ಕಾರಕ್ಕೆ ಒಂದು ಮಾದರಿ ವರದಿ ಪ್ರಸ್ತಾವನೆ ಸಲ್ಲಿಸಿ. ಆ ಮೂಲಕ ಜೀವವೈವಿಧ್ಯ ಸಮಿತಿಯ ರೂಪರೇಷೆಗಳಿಗೆ ವಿಸ್ತಾರವಾದ ವ್ಯಾಪ್ತಿ ದೊರೆಯುವಂತಾಗಲಿ ಎಂದು ಹೇಳಿದರು.
ಪ್ರಾಕೃತಿಕವಾಗಿ ನಮ್ಮೂರಿಗೆ ದೊರೆತಿರುವ ನೈಸರ್ಗಿಕ ಸಂಪತ್ತಿನ ರಕ್ಷಣೆಯ ಹೊಣೆ ನಮ್ಮದೇ ಆಗಿದ್ದು ದೈವದತ್ತವಾದ ಕೊಡುಗೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿದೆ. ಆದ್ದರಿಂದ ಜೀವವೈವಿಧ್ಯ ಮಂಡಳಿ ಉದ್ದೇಶ ಇದೇ ಆಗಿದ್ದು ಗ್ರಾಮ ಸಮಿತಿಯ ಸಹಕಾರದೊಂದಿಗೆ ಧ್ಯೇಯೋದ್ದೇಶ ಈಡೇರಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.
ಸಭೆಯಲ್ಲಿ ಪ್ರತಿ ಗ್ರಾಮದಲ್ಲಿರುವ ಜೀವವೈವಿಧ್ಯ ಸಮಿತಿಯ ಸಬಲೀಕರಣ ಹಾಗೂ ಸದೃಢೀಕರಣ ಆಗಬೇಕು.ಅದಕ್ಕಾಗಿ ಕಾರ್ಯಯೋಜನೆ ರೂಪಿಸಿ ಎಂದು ಸಮಿತಿ ಅಧ್ಯಕ್ಷ ರಾಘವೇಂದ್ರ ಮನವಿ ಮಾಡಿದರು.
ಮುಖಂಡರಾದ ಬಿ.ಪಿ.ರಾಮಚಂದ್ರ, ಬಷೀರ್ ಅಹಮ್ಮದ್, ಟಿ.ಡಿ.ಸೋಮಶೇಖರ್, ಗಿರೀಶ ಜಂಬಳ್ಳಿ, ಗಣೇಶ, ಕೃಷ್ಣಮೂರ್ತಿ, ತಾಪಂ ಇಒ ಪ್ರವೀಣ್ಕುಮಾರ್, ಆರ್ಎಫ್ಒಗಳಾದ ತೀರ್ಥಹಳ್ಳಿ ಬಿ.ಸಿ.ಲೋಕೇಶ್, ಅರಸಾಳು ಕೃಷ್ಣ ಅಣ್ಣಯ್ಯಗೌಡ, ಹೊಸನಗರದ ಅರವಿಂದ್, ಪಿಡಿಒ ಮುರುಗೇಶ್ ಇತರರಿದ್ದರು.