

ಸೋಮವಾರಪೇಟೆ: ಹೆಚ್ಚು ಮಳೆಬೀಳುವ ಗ್ರಾಮದಲ್ಲಿ ಅನೇಕ ಸವಾಲುಗಳ ಮಧ್ಯೆ ಕೃಷಿಯೊಂದಿಗೆ ಜೇನುಕೃಷಿಯನ್ನು ಮುಂದುವರಿಸಿ, ಯಶಕಂಡ ಪ್ರಗತಿಪರ ಕೃಷಿಕರಲ್ಲಿ ಸೋಮವಾರಪೇಟೆ ತಾಲೂಕಿನ ಇನಕನಹಳ್ಳಿ ಗ್ರಾಮದ ಎಸ್.ಟಿ.ಉತ್ತಯ್ಯ ಒಬ್ಬರಾಗಿದ್ದಾರೆ.
ಉತ್ತಯ್ಯ ಅವರಿಗೆ 9 ವರ್ಷವಿದ್ದಾಗ ಅವರ ತಂದೆ ತಮ್ಮಣ್ಣ ಮೃತರಾದರು. ತಂದೆ ಜೇನುಕೃಷಿಯಲ್ಲಿ ಪಳಗಿದ ರೈತರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಉತ್ತಯ್ಯ ಅವರಿಗೆ ಜೇನುಕೃಷಿಯ ಬಗ್ಗೆ ಕಲಿಸಿದ್ದರು. ಉತ್ತಯ್ಯ ಅವರು 1985ರಲ್ಲಿ ಕೇವಲ 50 ಜೇನು ಪೆಟ್ಟಿಗೆಯಲ್ಲಿ 900 ಕೆ.ಜಿ. ಜೇನುತುಪ್ಪ ಉತ್ಪಾದಿಸಿ ಕೊಡಗು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ್ದ ದಾಖಲೆ ಇವತ್ತಿಗೂ ಇದೆ.
ಮನೆಯ ಸಮೀಪವೇ ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕಣೆ ಮಾಡುತ್ತಾರೆ. ಕೆಲ ವರ್ಷ ನೂರು ಪೆಟ್ಟಿಗೆಗಳಲ್ಲಿ ಜೇನುಕುಟುಂಬಗಳನ್ನು ಸಾಕಿದ್ದ ಉದಾಹರಣೆಯೂ ಇದೆ. 1993ರಲ್ಲಿ ಕಾಣಿಸಿಕೊಂಡ ಥಾಯಿಸಾಕ್ ಬ್ರೂಡ್ ಹೆಸರಿನ ನಂಜುರೋಗದಿಂದ ಜೇನು ಕೃಷಿ ನಾಶವಾಗಿತ್ತು. 100 ಕುಟುಂಬಗಳಲ್ಲಿ 80 ಪೆಟ್ಟಿಯಿಂದ ಜೇನ್ನೊಣಗಳು ಹಾರಿ ಹೋಗಿದ್ದವು. 2018ರಲ್ಲೂ ಮಾರಕರೋಗ ಕಾಣಿಸಿಕೊಂಡು ಉತ್ತಯ್ಯ ನಷ್ಟ ಅನುಭವಿಸಿದ್ದರು.
ಎಷ್ಟೇ ನಷ್ಟವಾದರೂ, ಜೇನು ಕೃಷಿಯನ್ನು ಕೈಬಿಟ್ಟಿಲ್ಲ. ಜೇನು ಕೃಷಿ ನಮ್ಮ ಕುಟುಂಬವನ್ನು ಸಾಕಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದೆ ಎಂದು ಉತ್ತಯ್ಯ ಹೆಮ್ಮೆಯಿಂದ ಹೇಳುತ್ತಾರೆ. ಪ್ರಸಕ್ತ 50 ಪೆಟ್ಟಿಗೆಯಲ್ಲಿ ಜೇನು ಕುಟುಂಬಗಳಿವೆ. ಬೆಳಗ್ಗೆ 2 ಗಂಟೆಗಳ ಕಾಲ ಜೇನುಕುಟುಂಬಗಳ ಆರೈಕೆ ಮಾಡುತ್ತಾರೆ. ಪತ್ನಿ ಸವಿತಾ, ಮಕ್ಕಳಾದ ದೀಪಕ್, ಮಿಥುನ್ ಅವರಿಗೂ ಜೇನು ಕೃಷಿಯೆಂದರೆ ಇಷ್ಟದ ಕೃಷಿಯಾಗಿದೆ.
ಜೇನುಕೃಷಿಯಿಂದ ಬಂದ ಆದಾಯವನ್ನು ಕಾಫಿ, ಏಲಕ್ಕಿ ತೋಟಗಳ ನಿರ್ವಹಣೆಗೂ ಉಪಯೋಗಿಸುತ್ತಾರೆ. ಒಂದು ಪೆಟ್ಟಿಗೆಯಲ್ಲಿ ವಾರ್ಷಿಕವಾಗಿ 7ರಿಂದ 10 ಕೆ.ಜಿ.ಯಷ್ಟು ಗುಣಮಟ್ಟದ ಜೇನು ತುಪ್ಪ ಉತ್ಪಾದಿಸಬಹುದು. ಕೆಜಿಗೆ 1300 ರಿಂದ 1500 ರೂ.ಗಳಿಗೆ ಮಾರಾಟ ಮಾಡುತ್ತಾರೆ. ಮಳೆ, ಹವಾಮಾನ, ಮರಗಿಡಗಳಲ್ಲಿ ಅರಳುವ ಹೂಗಳ ಮೇಲೆ ಜೇನಿನ ಉತ್ಪಾದನೆ ನಿರ್ಧಾರವಾಗುತ್ತದೆ. ಆರೋಗ್ಯವಂತ ಜೇನುಕುಟುಂಬಗಳಲ್ಲಿ ಹೆಚ್ಚಿನ ಜೇನು ತುಪ್ಪ ಪಡೆಯಬಹುದು. ಉತ್ತಮ ಹವಾಗುಣ ಇದ್ದರೆ ಹದಿನೈದು ದಿನಗಳಿಗೊಮ್ಮೆ ಪೆಟ್ಟಿಗೆಯಿಂದ ಜೇನುತುಪ್ಪ ತೆಗೆಯಬಹುದು.
ಅತಿಯಾದ ಮಳೆಯಲ್ಲಿ ಜೇನ್ನೊಣಗಳು ಪುಷ್ಪರಸಕ್ಕೆ ಹಾರಿಹೋದಾಗ ದಾರಿಯಲ್ಲೇ ಮಳೆಯ ರಭಸಕ್ಕೆ ಜೀವ ಕಳೆದುಕೊಳ್ಳುತ್ತವೆ. ಇದರಿಂದ ಜೇನ್ನೊಣಗಳ ಸಂತತಿ ಕಡಿಮೆಯಾಗಿ ಉತ್ಪಾದನೆ ಕಡಿಮೆಯಾಗುತ್ತದೆ. ಪ್ರಸಕ್ತ ವರ್ಷ ಮೇ ತಿಂಗಳಿನಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಳೆದ 5 ತಿಂಗಳಿನಿಂದ ಜೇನುತುಪ್ಪ ತೆಗೆಯಲು ಸಾಧ್ಯವಾಗಿಲ್ಲ. ಜೇನುಕುಟುಂಬಗಳನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಾಫಿ, ಏಲಕ್ಕಿ ಫಸಲು ನಮ್ಮ ಕೈಹಿಡಿಯಬೇಕಿದೆ ಎಂದು ಉತ್ತಯ್ಯ ಹೇಳಿದರು.
ಜೇನುಕೃಷಿಯಲ್ಲಿ ಬಂದ ಆದಾಯದಲ್ಲಿ 5 ಎಕರೆ ಜಾಗದಲ್ಲಿ ಅರೇಬಿಕಾ ಕಾಫಿ ತೋಟ ಮಾಡಿದ್ದಾರೆ. ಒಂದು ದಶಕದ ಹಿಂದೆ ಏಲಕ್ಕಿ ಬೆಳೆಯುತ್ತಿದ್ದರು. ಅತಿಯಾದ ಮಳೆ, ರೋಗಬಾಧೆಯಿಂದ ಏಲಕ್ಕಿ ಕೃಷಿ ಹಿಡಿಯಲಿಲ್ಲ. ನಂತರ ಕಾಫಿ ಬೆಳೆಯತ್ತ ಒಲವು ತೋರಿದರು. ಸದ್ಯ ಮೂರು ಎಕರೆಯಲ್ಲಿ ಏಲಕ್ಕಿ ಬೆಳೆಯುತ್ತಿದ್ದಾರೆ. ಕಾಫಿ ಏಲಕ್ಕಿ ಕೃಷಿಯ ಬಹುತೇಕ ಕೆಲಸವನ್ನು ದಂಪತಿಯೇ ನಿರ್ವಹಿಸುತ್ತಾರೆ.