ಜೇಕಿನಕಟ್ಟಿ ಸರ್ಕಾರಿ ಕ್ವಾರಂಟೈನ್​ಗೆ ಸೌಲಭ್ಯ

14 Sgn 01 1b
Published on

ಶಿಗ್ಗಾಂವಿ: ತಾಲೂಕಿನ ಜೇಕಿನಕಟ್ಟಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿನ ಸರ್ಕಾರಿ ಕ್ವಾರಂಟೈನ್​ಗೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ತಾಲೂಕಾಡಳಿತಕ್ಕೆ ಉಪವಿಭಾಗಾಧಿಕಾರಿ ಸೂಚಿಸಿದ್ದಾರೆ.

ಸರ್ಕಾರಿ ಕ್ವಾರಂಟೈನ್​ನಲ್ಲಿ ಮೂಲ ಸೌಲಭ್ಯಗಳಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿರುವ ಕುರಿತು ‘ವಿಜಯವಾಣಿ’ಯಲ್ಲಿ ಮೇ 14ರಂದು ‘ಕ್ವಾರಂಟೈನ್​ಗೆ ಒಳಗಾದವರ ತಕರಾರು’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಾಲೂಕು ಆಡಳಿತಕ್ಕೆ ಸೂಚನೆ ನೀಡುವ ಮೂಲಕ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.

ಗುರುವಾರ ಬೆಳಗ್ಗೆ ತಹಸೀಲ್ದಾರ್ ಪ್ರಕಾಶ ಕುದರಿ ಮಾರ್ಗದರ್ಶನದಲ್ಲಿ ಶಿಗ್ಗಾಂವಿ ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನಯ್ಯಾ ಹಿರೇಮಠ ಸಿಬ್ಬಂದಿ ಸಹಾಯದಿಂದ ವಸತಿ ನಿಲಯ ಸ್ವಚ್ಛಗೊಳಿಸಿದರು. ಸರ್ಕಾರಿ ಕ್ವಾರಂಟೈನ್​ನಲ್ಲಿ ಇರಲು ಇಚ್ಛಿಸದ ಎಂಟು ಜನರನ್ನು ಹಾವೇರಿಯ ಮಯೂರ ಲಾಡ್ಜ್​ನಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್​ನಲ್ಲಿರುವ ಮೂವರು ಗರ್ಭಿಣಿಯರು ಸೇರಿ ಎಲ್ಲರ ಆರೋಗ್ಯ ತಪಾಸಣೆ ಮಾಡಿ ಪ್ರತ್ಯೇಕ ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಕಡಿತದಿಂದ ನೀರಿನ ಕೊರತೆಯಾಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಇತ್ತೀಚೆಗೆ ವಿವಿಧ ರಾಜ್ಯಗಳಿಂದ ತಾಲೂಕಿಗೆ ಆಗಮಿಸಿದ 25 ಜನರನ್ನು ಜೇಕಿನಕಟ್ಟಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಆದರೆ, ಇಲ್ಲಿ ವ್ಯವಸ್ಥೆ ಸರಿಯಾಗಿಲ್ಲ ಎಂದು ಕ್ವಾರಂಟೈನ್​ಗೆ ಒಳಗಾದವರು ಅಳಲು ತೋಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net