ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಿರಿ:ಸಿಎಂಗೆ ಶಾಸಕ ರಾಯರಡ್ಡಿ ಆಗ್ರಹ

BASAVARAJ RAYARADDI
Published on

ಕೊಪ್ಪಳ: ಮಳೆ ಕೊರತೆಯಿಂದ ಬೆಳೆ ನಷ್ಟ ಸಂಭವಿಸಿದೆ. ಇದ್ದ ಬೆಳೆ ಉಳಿಸಿಕೊಳ್ಳಲು ರೈತರು ಬೋರ್‌ವೆಲ್ ಅವಲಂಬಿಸಿದ್ದಾರೆ. ಆದರೆ, ಲೋಡ್ ಹೆಚ್ಚಿ ವಿದ್ಯುತ್ ಪರಿವರ್ತಕಗಳು ಸುಡುತ್ತಿದ್ದು, ಜೆಸ್ಕಾಂ ಅಧಿಕಾರಿಗಳು ಸಕಾಲಕ್ಕೆ ಪೂರೈಸುತ್ತಿಲ್ಲವೆಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.


ವಿಜಯವಾಣಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಮಾನ್ಸೂನ್ ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ನೀರಾವರಿ ಆಶ್ರಿತ ರೈತರು ಉಳಿದ ಬೆಳೆ ರಕ್ಷಣೆಗೆ ಹೆಣಗಾಡುತ್ತಿದ್ದಾರೆ. ಆದರೆ, ಜೆಸ್ಕಾಂ ಅಧಿಕಾರಿಗಳು ರೈತರಿಗೆ ಅಗತ್ಯ ಇರುವ ವಿದ್ಯುತ್ ಪರಿವರ್ತಕ ಹಾಗೂ ಇತರ ಸಾಮಗ್ರಿಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಮೇಲಧಿಕಾರಿಗಳು ರೈತರ ಗೋಳು ಕೇಳುತ್ತಿಲ್ಲ. ಶಾಸಕರಾದ ನಾವು ಕರೆ ಮಾಡಿದರೂ ಜೆಸ್ಕಾಂ ಎಂಡಿ ಕರೆ ಸ್ವೀಕರಿಸುವುದಿಲ್ಲ. ವಿಭಾಗವಾರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿಲ್ಲ. ಕಳೆದೆರೆಡು ತಿಂಗಳಿಂದ ಸಮಸ್ಯೆ ಬಿಗಡಾಯಿಸಿದೆ. ರೈತರು ಏಕಕಾಲಕ್ಕೆ ಮೋಟಾರ್ ಬಳಸುವುದರಿಂದ ಟಿಸಿ ಸುಡುತ್ತಿವೆ.


25, 63, 100 ಕೆವಿಎ ಟಿಸಿಗಳು ಸುಟ್ಟು ತಿಂಗಳಾದರೂ ಪೂರೈಸುತ್ತಿಲ್ಲ. ಸ್ಥಳೀಯವಾಗಿ ಜೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ್ದು, ರೈತರ ಬೇಡಿಕೆಗೆ ತಕ್ಕಂತೆ ಪರಿಕರಗಳನ್ನು ಪೂರೈಸಲು ಆಗುತ್ತಿಲ್ಲವೆಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ನನ್ನ ಮತ ಕ್ಷೇತ್ರ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ 100ಕ್ಕೂ ಹೆಚ್ಚು ಟಿಸಿ ಸುಟ್ಟಿವೆ. ಅವುಗಳ ಬದಲಾವಣೆ ಆಗಿಲ್ಲ. ಹೆಚ್ಚುವರಿ 100 ಟಿಸಿ ಅವಶ್ಯವಿದ್ದು, ಅಧಿಕಾರಿಗಳು ಪೂರೈಸುತ್ತಿಲ್ಲ. ಇದು ಕೇವಲ ಯಲಬುರ್ಗಾ ಕಥೆ ಅಲ್ಲ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಗಂಭೀರ ಆರೋಪ ಮಾಡಿದರು.


ಈ ಸಂಬಂಧ ಜೆಸ್ಕಾಂ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವೆ. ಅವರೂ ರೈತರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಂಡು ಅಧಿಕಾರಿಗಳನ್ನು ಎಚ್ಚರಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net