

ಹಾಸನ: ಜೆಸಿಬಿ ಪಕ್ಷಗಳು ಯಾವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಪ್ರಾಮಾಣಿಕ ರಾಜಕಾರಣ ಮತ್ತು ಯುವ ಸಮುದಾಯವನ್ನು ಜಾಗೃತಗೊಳಿಸುವುದು ನಮ್ಮ ಪಕ್ಷದ ಉದ್ದೇಶ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಿಂಗೇಗೌಡ ತಿಳಿಸಿದರು.
ಇಂದಿನ ಅಶುದ್ಧ ಮತ್ತು ಅನಾಚಾರದ ರಾಜಕಾರಣವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಜಾಗೃತಗೊಳಿಸಬೇಕಾಗಿದ್ದು, ಭ್ರಷ್ಟ ಮತ್ತು ಲಂಚಗುಳಿತನದ ವಿರುದ್ಧ ರಾಜ್ಯದ ಜನರಲ್ಲಿ ಅರಿವು ಮೂಡಿಸಿ ರಾಜಕಾರಣದ ಪಾವಿತ್ರೃತೆಯನ್ನು ಪುನರ್ ಸ್ಥಾಪನೆ ಮಾಡಬೇಕು. ಅಸಮಾನತೆಯನ್ನು ನಿವಾರಿಸಲು ಹಾಗೂ ಸ್ತ್ರೀಯರಲ್ಲಿ ಜಾಗೃತಿ ಮೂಡಿಸಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಗ್ರಾಮ ಮಟ್ಟದಿಂದ ಸಂಘಟಿಸಿ ಪದಾಧಿಕಾರಿಗಳನ್ನು ನೇಮಿಸಲಾಗುವುದು. ನಿಸ್ವಾರ್ಥ ರಾಜಕಾರಣಕ್ಕಾಗಿ ಸೇವಾ ಮನೋಭಾವ ಹೊಂದಿರುವ ಸೂಕ್ತ ಅಭ್ಯರ್ಥಿಯನ್ನು ಮುಂದಿನ ಚುನಾವಣೆಗೆ ಸಿದ್ಧಗೊಳಿಸಲಾಗುವುದು. ಮಹಿಳೆಯರ ಸಂಘಟನೆಗಾಗಿ ಪ್ರತಿ ಹಂತದಲ್ಲೂ ಸ್ಥಾನಮಾನ ಮತ್ತು ಜವಾಬ್ದಾರಿ ವಹಿಸಬೇಕು. ಭ್ರಷ್ಟ ಹಾಗೂ ಲಂಚಕೋರ ಅಧಿಕಾರಿಗಳ ಮತ್ತು ರಾಜಕಾರಣಿಗಳ ಮಟ್ಟ ಹಾಕುವ ಯುವ ಪಡೆಯನ್ನು ಕಟ್ಟುವುದು ಮತ್ತು ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್, ಮುಖಂಡರಾದ ಕೇಶವಮೂರ್ತಿ, ದೇವರಾಜು, ಹರ್ಷ, ನಾಗರಾಜು ಇತರರು ಉಪಸ್ಥಿತರಿದ್ದರು.