ಜೆಸಿಬಿ ಆಡಳಿತ ಸಾಕು, ಕೆಆರ್‌ಎಸ್ ಪಕ್ಷ ಬಲಪಡಿಸಿ: ಹಾಸನ ಸಂಭಾವ್ಯ ಅಭ್ಯರ್ಥಿ ವಿ.ರಮೇಶ್

ಜೆಸಿಬಿ ಆಡಳಿತ ಸಾಕು, ಕೆಆರ್‌ಎಸ್ ಪಕ್ಷ ಬಲಪಡಿಸಿ: ಹಾಸನ ಸಂಭಾವ್ಯ ಅಭ್ಯರ್ಥಿ ವಿ.ರಮೇಶ್
Published on

ಹಾಸನ : ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ. ಜನರಿಗೆ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಈಗಾಗಲೇ ಜನಪರ ಪ್ರಣಾಳಿಕೆಯನ್ನು ಪಕ್ಷದ ವತಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ವಿ.ರಮೇಶ್ ಬೂವನಹಳ್ಳಿ ತಿಳಿಸಿದರು.

ಕೆಆರ್‌ಎಸ್ ಪಕ್ಷವು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ ಹಾಗೂ ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಲು ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದಲ್ಲದೆ ಶಿಕ್ಷಣ, ಉದ್ಯೋಗ, ಆರೋಗ್ಯ, ರಸ್ತೆ ಸೇರಿದಂತೆ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ಭ್ರಷ್ಟಾಚಾರಮುಕ್ತ ಆಡಳಿತಕ್ಕೆ ಹೆಚ್ಚಿನ ಹೊತ್ತು ನೀಡಲಿದ್ದಾರೆ, ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ, ಸರ್ಕಾರಿ ನೌಕರರ ಕೆಲಸದಲ್ಲಿ ಪಾರದರ್ಶಕತೆ, ಕೃಷಿ, ಮಹಿಳೆ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವಜನತೆ ಮತ್ತು ಉದ್ಯೋಗ, ಪ್ರಾದೇಶಿಕತೆ, ಕನ್ನಡ, ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಇಷ್ಟು ವರ್ಷ ನಮ್ಮ ರಾಜ್ಯದಲ್ಲಿ ಆಡಳಿತ ನಡೆಸಿದಂತಹ ಜೆಸಿಬಿ ಪಕ್ಷಗಳು ನಮ್ಮನ್ನು ಅಭಿವೃದ್ಧಿಪಡಿಸಿದ್ದಕ್ಕಿಂತ ಅವರುಗಳನ್ನು ಅವರೇ ಅಭಿವೃದ್ಧಿಪಡಿಸಿಕೊಂಡಿದ್ದು ಹೆಚ್ಚು. ಆದ್ದರಿಂದ ಮುಂಬರುವ ದಿನಗಳಲ್ಲಿ ಕೆಆರ್‌ಎಸ್ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತಂದಿದ್ದೆ ಆದರೆ ಬಸವಣ್ಣನವರ ಆಶಯದ ಕಲ್ಯಾಣ ಕರ್ನಾಟಕ ಮತ್ತು ಕುವೆಂಪು ಅವರ ಆಶಯದ ಸರ್ವೋದಯ ಕರ್ನಾಟಕವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೊಳೆನರಸೀಪುರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ನಾಗರಾಜ್, ಅರಸೀಕೆರೆ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಉಮೇಶ್ ಬೆಳಗುಂಬ, ಚನ್ನರಾಯಪಟ್ಟಣದ ಸಂಭಾವ್ಯ ಅಭ್ಯರ್ಥಿ ಶಿವಕುಮಾರ್, ಬೇಲೂರು ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಆದೇಶ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net